ಉಳುವರೆ: ಶಿರೂರಿನಲ್ಲಿ ಗುಡ್ಡ ಕುಸಿದು ದುರಂತ ಸಂಭವಿಸಿದ ಘಟನೆ ಗಂಭೀರವಾದದ್ದು. ಅಧಿವೇಶನ ಇದ್ದರೂ ಮುಖ್ಯಮಂತ್ರಿ ಘಟನೆ ನಡೆದ ತಕ್ಷಣವೇ ಬರಬೇಕಿತ್ತು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಗುಡ್ಡ ಕುಸಿತದಿಂದ ಮನೆಗಳು ನಾಮಾವಶೇಷವಾದ ಉಳುವರೆ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ವೇಳೆ ಮಾಧ್ಯಮದವರ ಜತೆ ಅವರು ಮಾತನಾಡಿದರು.
'ಘಟನೆ ನಡೆದ ಆರು ದಿನದ ಬಳಿಕ ಸ್ಥಳಕ್ಕೆ ಮುಖ್ಯಮಂತ್ರಿ ಭೇಟಿ ನೀಡುತ್ತಿರುವುದರ ಬಗ್ಗೆ ಅವರನ್ನು ನೀವೇ ಪ್ರಶ್ನಿಸಿ' ಎಂದು ಮಾಧ್ಯಮವರಿಗೆ ಹೇಳಿದರು.
'ಮಣ್ಣು ತೆರವು, ಕಣ್ಮರೆಯಾದವರ ಪತ್ತೆ ಕಾರ್ಯ ವಿಳಂಬವಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯತನ ಕಾರಣ. ಕೇಂದ್ರ ಸರ್ಕಾರ ಸೇನೆಯ ತುಕಡಿ ನಿಯೋಜಿಸುವ ಮೂಲಕ ಕಣ್ಮರೆಯಾದವರ ಕುಟುಂಬಕ್ಕೆ ಸ್ಪಂದಿಸಿದೆ' ಎಂದರು.
'ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ತಕ್ಷಣ ಕ್ರಮವಹಿಸಲಿ' ಎಂದರು.
'ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ್ದು ಘಟನೆಗೆ ಕಾರಣವಾಗಿದ್ದು, ಕಾಮಗಾರಿ ನಡೆಸಿದ ಐ.ಆರ್.ಬಿ ಕಂಪನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಇದು ಆರೋಪ, ಪ್ರತ್ಯಾರೋಪದ ಸಮಯವಲ್ಲ. ಸಂತ್ರಸ್ತರ ನೆರವಿಗೆ ಕೆಲಸ ಮಾಡಬೇಕಿದೆ' ಎಂದರು.
ಉಳುವರೆ ಗ್ರಾಮದ ಸಂತ್ರಸ್ತ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಶಾಸಕರಾದ ದಿನಕರ ಶೆಟ್ಟಿ, ಗಣಪತಿ ಉಳ್ವೇಕರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.