ಕಳಚೆ (ಕಾರವಾರ): ‘ಯಲ್ಲಾಪುರ ತಾಲ್ಲೂಕಿನ ಕಳಚೆಯಲ್ಲಿ ಆಗಿರುವ ಭೂಕುಸಿತದ ಭೌಗೋಳಿಕ ಅಧ್ಯಯನ ಮಾಡಲಾಗುವುದು. ತಮಗೆ ಶಾಶ್ವತವಾದ ಪುನರ್ವಸತಿ ಮಾಡಬೇಕು ಎಂಬ ಸ್ಥಳೀಯರ ಬೇಡಿಕೆಯ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಭೂಕುಸಿತವಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
‘ಗ್ರಾಮಕ್ಕೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಹಾಗಾಗಿ ಪರ್ಯಾಯ ಮಾರ್ಗದಲ್ಲಿ ತಾತ್ಕಾಲಿಕ ಸಂಪರ್ಕ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಯವರು ಶ್ರಮಿಸುತ್ತಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿ ಅದು ಸಾಧ್ಯವಾಗಲಿದೆ. ವಿದ್ಯುತ್ ಸಂಪರ್ಕ ನೀಡಲು ಹೆಸ್ಕಾಂ ಸಿಬ್ಬಂದಿ ಹಗಲಿರುಳು ಕಾರ್ಯ ನಿರತರಾಗಿದ್ದಾರೆ. ಹಾನಿಯು ನಮ್ಮ ಊಹೆಗೂ ಮೀರಿದ ಪ್ರಮಾಣದಲ್ಲಿದೆ. ಹಾಗಾಗಿ ದುರಸ್ತಿಗೆ ಸಮಯ ಬೇಕಾಗಲಿದೆ’ ಎಂದು ಹೇಳಿದರು.
‘ಪ್ರಾಥಮಿಕ ಮಾಹಿತಿಯ ಪ್ರಕಾರ 15 ಮನೆಗಳು ಸಂಪೂರ್ಣ ಕುಸಿದಿವೆ. 28 ಮನೆಗಳು ಭಾಗಶಃ ಕುಸಿದಿವೆ. ಇಲ್ಲಿ ದೂರ ದೂರದಲ್ಲಿ ಮನೆಗಳಿವೆ. ಹಾಗಾಗಿ ಸಂಪೂರ್ಣ ಸಮೀಕ್ಷೆ ಮಾಡಲು ಸಮಯ ಬೇಕಾಗಲಿದೆ’ ಎಂದು ಮಾಹಿತಿ ನೀಡಿದರು.
‘ಗ್ರಾಮದ ಒಳಗೆ ವಸ್ತುಸ್ಥಿತಿ ಏನಿದೆ ಎಂಬ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಭೇಟಿ ನೀಡಲಾಗಿದೆ. ಹಲವು ಕಡೆ ಸ್ಥಿತಿ ಗಂಭೀರವಾಗಿದೆ. ಈ ಭಾಗದಲ್ಲಿ ಮೇಘಸ್ಫೋಟ ಆಗಿರುವ ಸಾಧ್ಯತೆಯು ಪ್ರಾಥಮಿಕ ಪರಿಶೀಲನೆಯಿಂದ ಕಂಡುಬರುತ್ತಿದೆ. ಕಳಚೆಯ ಒಂದು ಕಡೆ ಕಾಳಿ ಕಣಿವೆ ಮತ್ತೊಂದೆಡೆ ಗಂಗಾವಳಿ ಕಣಿವೆಯಿವೆ. ಎರಡೂ ಕಡೆ ಒಂದೇ ಸಂದರ್ಭದಲ್ಲಿ ಪ್ರವಾಹ ಆಗಿರುವ ಕಾರಣ ಈ ಅನುಮಾನ ಮೂಡುತ್ತದೆ’ ಎಂದರು.
‘ಇಲ್ಲಿ ಮತ್ತಷ್ಟು ಮಣ್ಣು ಕುಸಿಯುವ ಸಾಧ್ಯತೆಯಿದೆ. ಸಣ್ಣ ಸಣ್ಣ ಕಾಲುವೆಗಳಂಥ ಪ್ರದೇಶಗಳೆಲ್ಲ ಈಗ ದೊಡ್ಡ ಕಣಿವೆಯಂತಾಗಿವೆ. ಮಣ್ಣು ಸಂಪೂರ್ಣ ಜಾರಿ ಹೋಗಿದೆ. ಜಮೀನುಗಳ, ತೋಟದಲ್ಲಿದ್ದ ಸಮೀಪದಲ್ಲಿದ್ದ ಚೆಕ್‌ಡ್ಯಾಂನಂಥ ನಿರ್ಮಾಣಗಳೆಲ್ಲ ನಾಶವಾಗಿವೆ. ಹಾಗಾಗಿ ಸ್ಥಳೀಯರಿಗೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಅವರಿಗೆ ಶಾಶ್ವತವಾದ ಪರಿಹಾರ ಕಲ್ಪಿಸುವ ಮಾರ್ಗೋಪಾಯಗಳನ್ನು ಹುಡುಕಲಾಗುವುದು. ಜಿಲ್ಲಾಡಳಿತವು ಜನರೊಂದಿಗಿದೆ. ಯಾರೂ ಆತಂಕ ಪಡುವುದು ಬೇಡ’ ಎಂದು ತಿಳಿಸಿದರು.
ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.