ADVERTISEMENT

‘ಅತಿಥಿ’ಗಳ ನೇಮಕ: ಬೇಡಿಕೆಯಷ್ಟು ಸಿಗದ ಮಂಜೂರಾತಿ

ಉಪನ್ಯಾಸಕರ ಕೊರತೆಯಿಂದ ಬಳಲುತ್ತಿವೆ ಸರ್ಕಾರಿ ಪದವಿಪೂರ್ವ ಕಾಲೇಜುಗಳು

ಗಣಪತಿ ಹೆಗಡೆ
Published 16 ಜೂನ್ 2024, 6:19 IST
Last Updated 16 ಜೂನ್ 2024, 6:19 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಕಾರವಾರ: ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯ ಸಮಸ್ಯೆ ಜ್ವಲಂತವಾಗಿದ್ದರ ನಡುವೆಯೇ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲೂ ಬೇಡಿಕೆಗೆ ತಕ್ಕಷ್ಟು ಮಂಜೂರಾತಿ ನೀಡದಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ.

ಜಿಲ್ಲೆಯಲ್ಲಿ 37 ಸರ್ಕಾರಿ, 31 ಅನುದಾನಿತ ಮತ್ತು 35 ಖಾಸಗಿ ಪದವಿಪೂರ್ವ ಕಾಲೇಜುಗಳಿವೆ. ಸದ್ಯ 240ಕ್ಕೂ ಹೆಚ್ಚು ಕಾಯಂ ಉಪನ್ಯಾಸಕರು ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜೂರಾಗಿದ್ದ ಹುದ್ದೆಗಳ ಪೈಕಿ ವಯೋ ನಿವೃತ್ತಿ, ವರ್ಗಾವಣೆ ಸೇರಿದಂತೆ 165 ರಷ್ಟು ಉಪನ್ಯಾಸಕರ ಹುದ್ದೆ ಖಾಲಿ ಇದೆ. ಇದರ ಹೊರತಾಗಿ ಹೆಚ್ಚಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರ ಅಗತ್ಯವೂ ಇದೆ.

ADVERTISEMENT

ಕಾಯಂ ಉಪನ್ಯಾಸಕರ ಕೊರತೆಯ ಕಾರಣಕ್ಕೆ ಅತಿಥಿ ಉಪನ್ಯಾಸಕರ ನಿಯೋಜನೆಗೆ ಜಿಲ್ಲೆಯಿಂದ ಪದವಿಪೂರ್ವ ಶಿಕ್ಷಣ ಇಲಾಖೆ 236 ಮಂದಿಯ ನೇಮಕಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಸದ್ಯ 188 ಉಪನ್ಯಾಸಕರ ನೇಮಕಕ್ಕೆ ಮಾತ್ರ ಒಪ್ಪಿಗೆ ಸಿಕ್ಕಿದೆ. ಇನ್ನೂ 48 ಉಪನ್ಯಾಸಕರ ಕೊರತೆಯನ್ನು ನಿಭಾಯಿಸುವ ಸವಾಲನ್ನು ಇಲಾಖೆ ನಿರ್ವಹಿಸಬೇಕಾಗಿದೆ.

‘ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದಕ್ಕೆ ಅನುಗುಣವಾಗಿ ಉಪನ್ಯಾಸಕರ ನೇಮಕಾತಿಯಾಗಬೇಕಿತ್ತು. ಪ್ರತಿ ವರ್ಷ ಅತಿಥಿ ಉಪನ್ಯಾಸಕರನ್ನು ನೀಡಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಲಾಗುತ್ತಿದೆ. ಅಗತ್ಯವಿರುವಷ್ಟು ಉಪನ್ಯಾಸಕರನ್ನೂ ನೇಮಿಸಿಕೊಳ್ಳದ ಪರಿಣಾಮ ಇರುವ ಬೆರಳೆಣಿಕೆಯ ಉಪನ್ಯಾಸಕರ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಿದೆ’ ಎಂದು ಹಿರಿಯ ಉಪನ್ಯಾಸಕರೊಬ್ಬರು ಸಮಸ್ಯೆ ಹೇಳಿಕೊಂಡರು.

‘ವಾಣಿಜ್ಯ ವಿಭಾಗಕ್ಕೆ ಲೆಕ್ಕಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯ ಬೋಧಿಸಲು ಪ್ರತ್ಯೇಕ ಉಪನ್ಯಾಸಕರ ಅಗತ್ಯವಿದೆ. ಆದರೆ, ಅತಿಥಿ ಉಪನ್ಯಾಸಕರ ನೇಮಕದ ವೇಳೆ ಎರಡೂ ವಿಷಯಕ್ಕೆ ಒಬ್ಬರಿಗೆ ಅವಕಾಶ ಕೊಡಲಾಗುತ್ತಿದೆ. ಇದರಿಂದ ವಾಣಿಜ್ಯ ವಿಭಾಗಕ್ಕೆ ಹೆಚ್ಚು ಕೊರತೆ ಉಂಟಾಗಿದೆ. ವಿಜ್ಞಾನ ವಿಭಾಗದ ಹಲವು ವಿಷಯಗಳಿಗೆ ಕೆಲ ಕಾಲೇಜುಗಳಲ್ಲಿ ಒಬ್ಬರೂ ಉಪನ್ಯಾಸಕರಿಲ್ಲ. ಅಲ್ಲಿಗೆ ಬೇರೆಡೆಯಿಂದ ಉಪನ್ಯಾಸಕರನ್ನು ನಿಯೋಜಿಸಿ ಸಮಸ್ಯೆ ಬಗೆಹರಿಸಲಾಗುತ್ತಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸತೀಶ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಾಯಂ ಉಪನ್ಯಾಸಕರಿಗೆ ಪ್ರತಿ ವಾರಕ್ಕೆ 20 ತಾಸು, ಅತಿಥಿ ಉಪನ್ಯಾಸಕರಿಗೆ 10 ತಾಸುಗಳಂತೆ ಕಾರ್ಯಭಾರ ನೀಡಲಾಗುತ್ತದೆ. ಕಾಯಂ ಉಪನ್ಯಾಸಕರ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಹೆಚ್ಚು ಅವಧಿ ಪಾಠ ನಡೆಯುವುದಿಲ್ಲ. ಅತಿಥಿ ಉಪನ್ಯಾಸಕರ ಮೇಲೆ ಹೆಚ್ಚುವರಿ ತರಗತಿಯ ಹೊರೆ ಹೊರೆಸಲು ಸಾಧ್ಯವಾಗದು. ಇದರಿಂದ ನಿಗದಿತ ಅವಧಿಯೊಳಗೆ ಪಠ್ಯ ಮುಗಿಸುವುದು ಕಷ್ಟ’ ಎಂದು ಪ್ರಾಚಾರ್ಯರೊಬ್ಬರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.