ADVERTISEMENT

ಕುಮಟಾ: ತರಬೇತಿ ಸಂಸ್ಥೆಯಾಗಿ ಡಿಜಿಟಲ್ ಲೈಬ್ರರಿ

ಕುಮಟಾದ ಡಾ.ಎ.ವಿ. ಬಾಳಿಗಾ ಕಾಲೇಜಿನ ಗ್ರಂಥಾಲಯ: ಅಧಿಕಾರಿ ಶ್ರಮ

ಎಂ.ಜಿ.ನಾಯ್ಕ
Published 21 ಅಕ್ಟೋಬರ್ 2024, 6:53 IST
Last Updated 21 ಅಕ್ಟೋಬರ್ 2024, 6:53 IST
ಕುಮಟಾದ ಡಾ.ಎ.ವಿ. ಬಾಳಿಗಾ ಕಲಾ-ವಿಜ್ಞಾನ ಪದವಿ ಕಾಲೇಜಿನ ಡಿಜಿಟಲ್ ವಾಚನಾಲಯದಲ್ಲಿರುವ ಮುಖ್ಯ ವಾಚನಾಲಯ ಅಧಿಕಾರಿ ಶಿವಾನಂದ ಬುಳ್ಳಾ
ಕುಮಟಾದ ಡಾ.ಎ.ವಿ. ಬಾಳಿಗಾ ಕಲಾ-ವಿಜ್ಞಾನ ಪದವಿ ಕಾಲೇಜಿನ ಡಿಜಿಟಲ್ ವಾಚನಾಲಯದಲ್ಲಿರುವ ಮುಖ್ಯ ವಾಚನಾಲಯ ಅಧಿಕಾರಿ ಶಿವಾನಂದ ಬುಳ್ಳಾ   

ಕುಮಟಾ: ಇಲ್ಲಿನ ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ ಪದವಿ ಕಾಲೇಜಿನ ಗ್ರಂಥಾಲಯ ಈಗ ಕೇವಲ ಪುಸ್ತಕಗಳ ದಾಸ್ತಾನಷ್ಟೆ ಹೊಂದಿಲ್ಲ. ಬದಲಾಗಿ ಇಲ್ಲಿ ಜಗತ್ತಿನ ವಿವಿಧ ಭಾಷೆಗಳ, ವಿವಿಧ ವಿಷಯಗಳ ಮಾಹಿತಿಯನ್ನು ಒಳಗೊಂಡ ಜ್ಞಾನಭಂಡಾರ ಹೊಂದಿದೆ. ಇವೆಲ್ಲವನ್ನೂ ವಿದ್ಯಾರ್ಥಿಗಳು ಬೆರಳ ತುದಿಯಲ್ಲಿ ಪಡೆದುಕೊಳ್ಳವಂತ ಡಿಜಿಟಲ್ ವಾಚನಾಲಯವಾಗಿ ರೂಪುಗೊಂಡಿದೆ.

ಹಿಂದೆ ಭಾರವಾದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಹಂಚಿ, ವಾಪಸ್ಸು ತೆಗೆದುಕೊಂಡು ಕಪಾಟಿನಲ್ಲಿ ಇಡುವ ಕೆಲಸವನ್ನು ವಾಚನಾಲಯ ಅಧಿಕಾರಿ ಮಾಡುತ್ತಿದ್ದರು. ಇದೇ ಭೌತಿಕ ವಾಚನಾಲಯ ಈಗ ವಿದ್ಯಾರ್ಥಿಗಳಿಗೆ ಜಗತ್ತಿನ ಹೊಚ್ಚ ಹೊಸ ಮಾಹಿತಿಯನ್ನು ಅವರ ಆ್ಯಂಡ್ರಾಯ್ಡ್ ಮೊಬೈಲ್‍ಗೆ ನೀಡಿ ಅವರು ತಮ್ಮ ಪ್ರಯಾಣದ ಸಮಯದಲ್ಲೂ ಅಧ್ಯಯನ ಮಾಡುವಂಥ ಸೌಲಭ್ಯ ಕಲ್ಪಿಸಿರುವುದು ವಿಶೇಷವಾಗಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕೆಲವೇ ಕಾಲೇಜುಗಳ ಅತ್ಯುತ್ತಮ ವಾಚನಾಲಯಗಳಲ್ಲಿ ಒಂದೆನಿಸಿರುವ ಈ ವಾಚನಾಲಯ ಓದುವ ತಾಣವಾಗಿಯಷ್ಟೆ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆ, ವಿವಿಧ ಹೊಸ ಕೋರ್ಸುಗಳ ಕುರಿತ ಮಾಹಿತಿ ಒದಗಿಸುವುದೂ ಸೇರಿದಂತೆ ವಿದ್ಯಾರ್ಥಿಗಳ ಜೀವನ ರೂಪಿಸಿಕೊಳ್ಳಲು ಮಾರ್ಗದರ್ಶಿಯಾಗಿಯೂ ಕೆಲಸ ಮಾಡುತ್ತಿದೆ.

ADVERTISEMENT

ವಾಚನಾಲಯ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಿರುವ, ದೇಶದ ಹಲವು ಕಾಲೇಜುಗಳಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಸಂಪನ್ಮೂಲ ವ್ಯಕ್ತಿಯಾಗಿ ಸಲಹೆ ನೀಡಿರುವ ಶಿವಾನಂದ ಬುಳ್ಳಾ ಎಂಬ ಗ್ರಂಥಾಲಯ ಅಧಿಕಾರಿ ಇಂತಹ ಬದಲಾವಣೆಗೆ ಕಾರಣರಾಗಿದ್ದಾರೆ ಎನ್ನುತ್ತಾರೆ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು.

‘ಕಾಲೇಜಿನ ಡಿಜಿಟಲ್ ಲೈಬ್ರರಿಯ ತಂತ್ರಾಂಶದ ಲಿಂಕ್ ಅನ್ನು ಯಾರೇ ಪಡೆದುಕೊಂಡರೂ ಅವರು ನಮ್ಮ ವಾಟ್ಸ್‌ಆ್ಯಪ್ ಗುಂಪಿಗೆ ಸೇರ್ಪಡೆಯಾಗುತ್ತಾರೆ. ಭೌತಿಕ ವಾಚನಾಲಯದಲ್ಲಿ ಮೂಲ ಮಾಹಿತಿ ಸಿಕ್ಕರೆ ಡಿಜಿಟಲ್ ಲೈಬ್ರರಿಯಲ್ಲಿ ಪರಿಷ್ಕೃತ ಹೊಸ ಮಾಹಿತಿಗಳು ವಿದ್ಯಾರ್ಥಿಗಳ ಕೈಸೇರುವಂಥ ವ್ಯವಸ್ಥೆ ವಿನ್ಯಾಸಗೊಳಿಸಲಾಗಿದೆ’ ಎಂದು ಶಿವಾನಂದ ಬುಳ್ಳ ಹೇಳಿದರು.

‘ಉನ್ನತ ವ್ಯಾಸಂಗ ಪಡೆಯುವರ, ಉದ್ಯಮಿಯಾಗ ಬಯಸುವವರ ಹಾಗೂ ಉದ್ಯೋಗಕ್ಕಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸುವವರ ಪ್ರತ್ಯೇಕ ವಾಟ್ಸ್‌ಆ್ಯಪ್ ಗುಂಪುಗಳಿವೆ. ಜ್ಞಾನಿಗಳಿಂದ ದಾನ ರೂಪದಲ್ಲಿ ಪಡೆದ ಇಂಥ ಮಾಹಿತಿಯನ್ನು ಆಸಕ್ತರಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಇಂದು ಬಲು ಬೇಡಿಕೆಯಿರುವ ಫ್ರೆಂಚ್, ಜರ್ಮನ್ ಭಾಷೆಗಳ ಜತೆ ಬೇರೆ ಬೇರೆ ದೇಶಗಳಲ್ಲಿ ಉದ್ಯೋಗ ಪಡೆಯಲು ನೆರವಾಗುವ ಭಾಷೆಗಳ ಕಲಿಕೆಗೂ ಡಿಜಿಲ್ ಲೈಬ್ರರಿಯಲ್ಲಿ ನೆರವು ಸಿಗಲಿದೆ’ ಎಂದು ವಿವರಿಸಿದರು.

‘ವಿದೇಶದಲ್ಲಿ ವ್ಯಾಸಂಗ ಮಾಡಬಯಸುವ ಅತ್ಯಂತ ಪ್ರತಿಭಾವಂತ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಸಾದಿಂದ ಆರಂಭಿಸಿ, ಅಲ್ಲಿಯ ವಿವಿಗಳು, ಹಣಕಾಸು ನೆರವು, ಶಿಷ್ಯವೇತನ ಸೌಲಭ್ಯ, ವಿದೇಶಕ್ಕೆ ತೆರಳಿದ ಮೇಲೆ ಅಲ್ಲಿ ಭಾಷಾಂತರಕಾರರ ಸೌಲಭ್ಯ ಸೇರಿ ಎಲ್ಲವೂ ಒಂದೇ ಪೋರ್ಟಲ್ ನಲ್ಲಿ ಲಭ್ಯವಾಗುವ ಹಾಗೆ ಡಿಜಿಟಲ್ ಲೈಬ್ರರಿ ವಿನ್ಯಾಸಗೊಳಿಸಲಾಗಿದೆ’ ಎಂದರು.

ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ತೀರಾ ಅಗತ್ಯವಿರುವ ಡಿಜಿಟಲ್ ಮಾಹಿತಿ ಸೌಲಭ್ಯವನ್ನು ಒದಗಿಸುವಲ್ಲಿ ಕಾಲೇಜಿನ ಗ್ರಂಥಾಲಯ ಮುಂದಿದೆ. ಗ್ರಂಥಾಲಯ ಅಧಿಕಾರಿ ಶಿವಾನಂದ ಬುಳ್ಳಾ ಇದರ ರೂವಾರಿ
ಎನ್.ಕೆ. ನಾಯಕ ಡಾ.ಎ.ವಿ.ಬಾಳಿಗಾ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಚಾರ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.