ಕಾರವಾರ: ರಾಜ್ಯದ ಒಟ್ಟೂ ವಿದ್ಯುತ್ ಉತ್ಪಾದನೆಯಲ್ಲಿ ಶೇ 34 ರಷ್ಟು ಕೊಡುಗೆ ನೀಡುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲೇ ವಿದ್ಯುತ್ ಪೂರೈಕೆಯಲ್ಲಿ ಅಡೆತಡೆ ಹೆಚ್ಚಿದೆ. ವಿದ್ಯುತ್ ಮಾರ್ಗ ನಿರ್ವಹಣೆಗೆ ಅಗತ್ಯವಿರುವ ಲೈನ್‍ಮನ್‍ಗಳ ಕೊರತೆ ಇದಕ್ಕೆ ಕಾರಣ ಎಂಬುದು ಅಧಿಕಾರಿಗಳ ವಾದ.
ನಾಲ್ಕು ವಿಭಾಗಗಳನ್ನು ಒಳಗೊಂಡಿರುವ ಹೆಸ್ಕಾಂ ಶಿರಸಿ ವೃತ್ತಕ್ಕೆ 1,111 ಲೈನ್‍ಮನ್ ಹುದ್ದೆಗಳು ಮಂಜೂರಾಗಿವೆ. ಆದರೆ, ಈ ಪೈಕಿ 611 ಜನ ಕಾರ್ಯನಿರ್ವಹಣೆ ಮಾಡುತ್ತಿದ್ದು, 500 ಹುದ್ದೆ ಖಾಲಿ ಉಳಿದಿವೆ. ಲೈನ್‍ಮನ್‍ಗಳ ಕೊರತೆಯ ಕಾರಣಕ್ಕೆ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುವ ಸಮಸ್ಯೆ ಬಗೆಹರಿಸಲು ಸಮಸ್ಯೆ ಎದುರಾಗುತ್ತಿದೆ.
‘49 ವರ್ಷಗಳ ಹಿಂದಿನ ವಿದ್ಯುತ್ ಮಾರ್ಗ, ಪೂರೈಕೆ ಆಧರಿಸಿ ಮಂಜೂರಾದ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈಗಿನ ಸ್ಥಿತಿ ಆಧರಿಸಿ ಮಂಜೂರು ಮಾಡಿದರೆ ಜಿಲ್ಲೆಗೆ ಕನಿಷ್ಠ ಎರಡೂವರೆ ಸಾವಿರ ಲೈನ್‍ಮನ್‍ಗಳ ಅಗತ್ಯವಿದೆ. ಹಳೆಯ ಮಾನದಂಡ ಅನುಸರಿಸಿದರೂ ಹುದ್ದೆಯಲ್ಲಿ ಶೇ 45 ರಷ್ಟು ಕೊರತೆ ಉಂಟಾಗುತ್ತಿದೆ’ ಎಂದು ಹೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಜಿಲ್ಲೆಗೆ ಅಗತ್ಯವಿರುವಷ್ಟು ಲೈನ್‍ಮನ್‍ಗಳ ನೇಮಕಾತಿಗೆ ಈಗಾಗಲೆ ಪ್ರಸ್ತಾವ ಸಲ್ಲಿಸಲಾಗಿದೆ.ದೀಪಕ ಕಾಮತ್, ಹೆಸ್ಕಾಂ ಅಧೀಕ್ಷಕ ಎಂಜಿನಿಯರ್
‘ಅರಣ್ಯ ಪ್ರದೇಶ ಹೆಚ್ಚಿರುವ ಜಿಲ್ಲೆಯಲ್ಲಿ ಮಳೆಗಾಲದ ವೇಳೆ ಮರಗಳು ಬಿದ್ದು ವಿದ್ಯುತ್ ತಂತಿ, ಕಂಬಗಳು ಮುರಿದು ಬೀಳುವುದು ಹೆಚ್ಚು. ಅವುಗಳನ್ನು ಸರಿಪಡಿಸಲು, ವಿದ್ಯುತ್ ಪೂರೈಕೆಯಲ್ಲಿನ ಅಡೆತಡೆ ನಿವಾರಿಸಲು ಲೈನ್‌ಮನ್‍ಗಳೇ ಕಾರ್ಯನಿರ್ವಹಿಸಬೇಕಾಗಿದೆ. ಅಗತ್ಯವಿರುವ ಈ ಹುದ್ದೆಯಲ್ಲೇ ಹೆಚ್ಚು ಕೊರತೆ ಇರುವ ಕಾರಣಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದನ್ನು ತಡೆಯಲು ಕಷ್ಟವಾಗಿದೆ’ ಎಂದು ಅಸಹಾಯಕತೆ ತೋಡಿಕೊಂಡರು.
‘ಲೈನ್‍ಮನ್ ಹುದ್ದೆಗೆ ನೇಮಕಗೊಳ್ಳುವವರಲ್ಲಿ ಹೊರ ಜಿಲ್ಲೆಯವರೇ ಹೆಚ್ಚಿದ್ದಾರೆ. ನೇಮಕಗೊಂಡು ಕೆಲ ವರ್ಷ ಮಾತ್ರ ಇಲ್ಲಿ ಕೆಲಸ ಮಾಡಿ, ಬಳಿಕ ತವರು ಜಿಲ್ಲೆಗೆ ವರ್ಗಾವಣೆ ಮಾಡಿಸಿಕೊಂಡು ತೆರಳುತ್ತಿದ್ದಾರೆ. ಅರಣ್ಯ ಪ್ರದೇಶ ಹೆಚ್ಚಿರುವ ಜಿಲ್ಲೆಯಲ್ಲಿ ವಿದ್ಯುತ್ ಮಾರ್ಗಗಳಿಗೆ ಪದೇ ಪದೇ ಹಾನಿಯುಂಟಾಗುವ ಕಾರಣಕ್ಕೆ ಇಲ್ಲಿ ಕೆಲಸ ಮಾಡಲು ಹಿಂದೇಟು ಹಾಕುವವರಿದ್ದಾರೆ. ಲೈನ್‍ಮನ್ ಹುದ್ದೆ ಖಾಲಿ ಉಳಿಯಲು ಇದೂ ಪ್ರಮುಖ ಕಾರಣ’ ಎಂದು ವಿವರಿಸಿದರು.
‘ಲೈನ್‍ಮನ್ ಕೊರತೆಯ ಕಾರಣ ನಿರ್ವಹಣೆಗೆ ತಾತ್ಕಾಲಿಕವಾಗಿ ಗ್ಯಾಂಗ್‍ಮನ್‍ಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ, ವಿದ್ಯುತ್ ಪರಿವರ್ತಕ ಸೇರಿದಂತೆ ವಿವಿಧ ಉಪಕರಣ ದುರಸ್ತಿಗೆ ಲೈನ್‍ಮನ್‍ಗಳ ಅಗತ್ಯವಿರುತ್ತದೆ. ಅವರ ಸಂಖ್ಯೆ ಕಡಿಮೆ ಇರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ಸಹಜ’ ಎಂದು ಹೆಸ್ಕಾಂ ಶಿರಸಿ ವೃತ್ತದ ಅಧೀಕ್ಷಕ ಎಂಜಿನಿಯರ್ ದೀಪಕ ಕಾಮತ್ ಪ್ರತಿಕ್ರಿಯಿಸಿದರು.
ಅಂಕಿ–ಅಂಶ
1,111 ಜಿಲ್ಲೆಗೆ ಮಂಜೂರಾದ ಲೈನ್‍ಮನ್‍ಗಳ ಸಂಖ್ಯೆ
611 ಕಾರ್ಯನಿರ್ವಹಿಸುತ್ತಿರುವ ಲೈನ್‍ಮನ್‍ಗಳು
500 ಖಾಲಿ ಇರುವ ಲೈನ್‍ಮನ್ ಹುದ್ದೆ
302 ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್‍ಮನ್‍ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.