ADVERTISEMENT

ಕೊಡಗು | ವರ್ಷಾಂತ್ಯದಲ್ಲಿ ಮದ್ಯ ಮಾರಾಟ ಬಂಪರ್

ಒಂದೇ ತಿಂಗಳಿನಲ್ಲಿ ಖರ್ಚಾದ 1.02 ಲಕ್ಷ ಬಾಕ್ಸ್ ಮದ್ಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2024, 14:35 IST
Last Updated 1 ಜನವರಿ 2024, 14:35 IST

ಕಾರವಾರ: ಕ್ರಿಸ್‍ಮಸ್ ರಜೆ, ಹೊಸ ವರ್ಷಾಚರಣೆಗಳ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರ ಚಿಗಿತುಕೊಂಡಿದ್ದು ಒಂದೆಡೆಯಾದರೆ ಅದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ ಮದ್ಯ ಮಾರಾಟವೂ ಜೋರಾಗಿ ನಡೆದಿದೆ.

ವರ್ಷದ ಉಳಿದ ಅವಧಿಗಿಂತ ಡಿಸೆಂಬರ್ ವೇಳೆಗೆ ಮದ್ಯ ಮಾರಾಟದಲ್ಲಿ ಏರುಗತಿ ಕಾಣುತ್ತದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮದ್ಯ ವಹಿವಾಟು ನಡೆದಿದೆ ಎಂಬುದು ಅಬಕಾರಿ ಇಲಾಖೆಯ ದಾಖಲೆಗಳು ಹೇಳಿವೆ.

ಸಾಲು ಸಾಲು ಸರ್ಕಾರಿ ರಜೆ, ಕ್ರಿಸ್‍ಮಸ್ ಸಡಗರ, ವರ್ಷಾಂತ್ಯದ ಮೋಜಿನ ಕಾರಣ ಕರಾವಳಿ, ಮಲೆನಾಡಿನ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿತ್ತು. ರೆಸಾರ್ಟ್, ಅತಿಥಿ ಗೃಹಗಳ ಕೊಠಡಿಗಳು ಪ್ರವಾಸಿಗರಿಂದ ಭರ್ತಿಯಾಗಿದ್ದವು. ಬಾರ್, ವೈನ್‍ಶಾಪ್‍ಗಳಲ್ಲಿಯೂ ಉತ್ತಮ ವಹಿವಾಟು ಕಳೆದೊಂದು ತಿಂಗಳಿನಿಂದ ನಡೆದಿತ್ತು.

ADVERTISEMENT

‘ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲೆಯ 8 ಅಬಕಾರಿ ವಲಯಗಳ ವ್ಯಾಪ್ತಿಯಲ್ಲಿ 1,02,332 ಬಾಕ್ಸ್ ಭಾರತೀಯ ತಯಾರಿಕೆ ಮದ್ಯ (ಐ.ಎಂ.ಎಲ್) ಮಾರಾಟವಾಗಿದೆ. ಕಳೆದ ವರ್ಷ ಈ ಪ್ರಮಾಣ 98,750 ರಷ್ಟಿತ್ತು. 93,366 ಬಾಕ್ಸ್ ಬಿಯರ್ ಕೂಡ ಮಾರಾಟವಾಗಿದೆ. ಕಳೆದ ವರ್ಷ 79,094 ಬಾಕ್ಸ್ ಮಾರಾಟವಾಗಿತ್ತು’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮದ್ಯದ ದರದಲ್ಲಿ ಏರಿಕೆಯಾಗಿದೆ. ಆದರೂ ಖರೀದಿ ಪ್ರಮಾಣ ಮಾತ್ರ ತಗ್ಗಿಲ್ಲ. ಪ್ರತಿ ವರ್ಷ ಮದ್ಯ ಮಾರಾಟ ಹೆಚ್ಚಳಕ್ಕೆ ಗುರಿ ನೀಡಲಾಗುತ್ತದೆ. ನಿಗದಿತ ಗುರಿಗಿಂತಲೂ ಉತ್ತಮ ಪ್ರಮಾಣದ ವಹಿವಾಟು ನಡೆದಿದೆ’ ಎಂದೂ ಅಧಿಕಾರಿಯೊಬ್ಬರು ಹೇಳಿದರು.

‘ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿರುವ ಮದ್ಯ ಮಾರಾಟ ಮಳಿಗೆಗಳಲ್ಲಿ ಹೆಚ್ಚಿನ ವಹಿವಾಟು ನಡೆದಿದೆ. ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಯರ್, ಘಟ್ಟದ ಮೇಲಿನ ಭಾಗದಲ್ಲಿ ಐ.ಎಂ.ಎಲ್ ಮಾರಾಟ ಹೆಚ್ಚಿದ್ದವು. ಶಿರಸಿ ವಲಯದಲ್ಲಿ 21,766 ಬಾಕ್ಸ್ ಮದ್ಯ ಮಾರಾಟ ಕಂಡಿದ್ದರೆ, ಕುಮಟಾ ವಲಯದಲ್ಲಿ 20,515 ಬಾಕ್ಸ್ ಬಿಯರ್ ಮಾರಾಟವಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.