ಹೊನ್ನಾವರ: ತಾಲ್ಲೂಕಿನ ಹಲವು ಗ್ರಾಮ ಪಂಚಾಯ್ತಿ ಹಾಗೂ ಪಟ್ಟಣದಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಸಮರ್ಪಕವಾಗಿ ನಡೆಯದ ಕಾರಣ ಹಾದಿ-ಬೀದಿಗಳೆಲ್ಲ ಪ್ಲಾಸ್ಟಿಕ್ ಸೇರಿದಂತೆ ಕಸದ ರಾಶಿಯಿಂದ ತುಂಬಿ ಮಲಿನಗೊಂಡಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ಕೆಲವು ಗ್ರಾಮೀಣ ರಸ್ತೆಗಳ ಅಕ್ಕಪಕ್ಕದ ಪ್ರದೇಶವು ಕಸ ಎಸೆಯುವವರ ಪಾಲಿಗೆ ಅನುಕೂಲವಾಗಿವೆ. ನಿರ್ಜನ ಪ್ರದೇಶಗಳಲ್ಲಿ ಕಸದ ರಾಶಿಗಳು ಕಾಣಸಿಗುತ್ತಿವೆ.
ರಾತ್ರಿ ವೇಳೆಯಲ್ಲಿ ವಾಹನಗಳಲ್ಲಿ ಮೂಟೆಗಟ್ಟಲೆ ಕಸ ತಂದು ಇಲ್ಲಿ ಸುರಿಯಲಾಗುತ್ತಿದೆ. ನಾಯಿ, ಹಂದಿ ಮತ್ತಿತರ ಪ್ರಾಣಿಗಳು ಕಸವನ್ನು ರಸ್ತೆಯಲ್ಲೆಲ್ಲ ಚೆಲ್ಲಾಡುತ್ತಿವೆ. ಅಂಗಡಿಗಳು ಸೇರಿದಂತೆ ಸಾರ್ವಜನಿಕ ಸ್ಥಳದಲ್ಲೇ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವುದು ನಿತ್ಯದ ದೃಶ್ಯ ಎಂಬುದು ಜನರ ದೂರು.
ತಾಲ್ಲೂಕಿನ 26 ಗ್ರಾಮ ಪಂಚಾಯ್ತಿಗಳ ಪೈಕಿ 24 ರಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಯಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಹಲವು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಕಸ ಸಂಗ್ರಹಣೆಗಾಗಿ ಜನರಿಂದ ತೆರಿಗೆ ಪಡೆಯುವ ವಿಷಯದ ಕುರಿತು ಪಂಚಾಯ್ತಿಗಳಲ್ಲಿ ನಿರ್ಣಯ ಕೈಗೊಳ್ಳಲು ಸೂಚಿಸಲಾಗುವುದು.ಸುರೇಶ ನಾಯ್ಕ, ತಾಲ್ಲೂಕು ಪಂಚಾಯ್ತಿ, ಇಒ
ಉಪ್ಪೋಣಿ, ಕಡ್ಲೆ, ಬಳ್ಕೂರು, ಮುಗ್ವಾ ಸೇರಿದಂತೆ ಹೆಚ್ಚಿನ ಗ್ರಾಮ ಪಂಚಾಯ್ತಿಗಳಲ್ಲಿ ಕಸ ಸಂಗ್ರಹಣೆ ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ಚಿಕ್ಕನಕೋಡ ಸೇರಿದಂತೆ ಕೆಲವು ಗ್ರಾಮ ಪಂಚಾಯ್ತಿಯಲ್ಲಿ ಕಸ ಸಂಗ್ರಹಣೆ ವಾಹನ ನಿಂತಲ್ಲೇ ನಿಂತು ತಿಂಗಳುಗಳೇ ಕಳೆದಿವೆ.
‘ಕಸ ಸಂಗ್ರಹಣೆಗೆ ವಾಹನ ಖರೀದಿಸಲಾಗಿದೆಯಾದರೂ ಅದಕ್ಕೆ ಚಾಲಕರ ನೇಮಕಾತಿ ನಡೆದಿಲ್ಲ. ಮಹಿಳಾ ಚಾಲಕರನ್ನು ನೇಮಿಸಬೇಕೆಂಬ ನಿಯಮವಿದ್ದು, ಹಲವರಿಗೆ ಇನ್ನೂ ಚಾಲನಾ ಪರವಾನಗಿ ಸಿಕ್ಕಿಲ್ಲ. ಚಾಲಕರಿಗೆ ಹಾಗೂ ಕಸ ಸಂಗ್ರಹಣೆ ಮಾಡುವ ಕಾರ್ಮಿಕರಿಗೆ ನಿಯಮಿತವಾಗಿ ಸಂಬಳ ಕೂಡ ಸಿಗುತ್ತಿಲ್ಲ’ ಎಂಬುದು ಅಧಿಕಾರಿಗಳ ವಲಯದಿಂದಲೇ ಕೇಳಿ ಬರುವ ದೂರು.
‘ಬೇರೆ ಊರಿನಿಂದ ವಾಹನಗಳಲ್ಲಿ ಕಸ ತಂದು ರಸ್ತೆ ಬದಿಗೆ ಸುರಿಯುವ ಕಾರ್ಯ ಅವ್ಯಾಹತವಾಗಿ ನಡೆದಿದ್ದು, ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಅರೊಳ್ಳಿ ಗ್ರಾಮದ ಸಂದೀಪ ನಾಯ್ಕ ಒತ್ತಾಯಿಸುತ್ತಾರೆ.
‘ತೆರಿಗೆ ವಿಧಿಸಲು ಮನಸ್ಸು ಮಾಡುತ್ತಿಲ್ಲ’
‘ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಗ್ರಹಣ ಹಿಡಿಯಲು ಆರ್ಥಿಕ ಕಾರಣಗಳೂ ಇವೆ. ತ್ಯಾಜ್ಯ ಸಂಗ್ರಹಿಸಲು ಗುರಿ ನಿಗದಿಪಡಿಸಲಾಗಿದೆ ಆದರೂ ಅದಕ್ಕೆ ಬೇಕಾದ ಹಣ ಹೊಂದಿಸಲು ಸರಿಯಾದ ಯೋಜನೆ ರೂಪಿಸಿಲ್ಲ. ಕಸ ಸಂಗ್ರಹಣೆ ಕಾರ್ಯಕ್ಕೆ ಜನರ ಮೇಲೆ ತೆರಿಗೆ ವಿಧಿಸಲು ಗ್ರಾಮ ಸಭೆಯಲ್ಲಿ ಠರಾವು ಸ್ವೀಕರಿಸಬೇಕಿದ್ದು ಜನಪ್ರತಿನಿಧಿಗಳು ಈ ಕುರಿತು ಇಚ್ಛಾಶಕ್ತಿ ಪ್ದರ್ಶಿಸುತ್ತಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಪಿಡಿಒ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.