ಭಟ್ಕಳ: ತಾಲ್ಲೂಕಿನಲ್ಲಿ 11 ಮಂದಿಗೆ ಕೋವಿಡ್ 19 ದೃಢಪಟ್ಟಿದ್ದ ಕಾರಣ ‘ಹಾಟ್‌ಸ್ಪಾಟ್’, ‘ರೆಡ್ ಝೋನ್’ ಆಗಿದ್ದ ಉಪ ವಿಭಾಗವು, ಎಲ್ಲ ಸೋಂಕಿತರು ಗುಣಮುಖರಾದ ಬಳಿಕ ‘ಕಿತ್ತಳೆ ವಲಯ’ವಾಗಿದೆ. ಈ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಮೂರನೇ ಹಂತದ ಲಾಕ್‌ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಮೇ 4ರಿಂದ ಎಲ್ಲವೂ ಮುಕ್ತವಾಗಲಿವೆಎಂದುಕೊಂಡಿದ್ದ ಸ್ಥಳೀಯರಿಗೆ,ಭಟ್ಕಳ ಹೊರತುಪಡಿಸಿ ಉಳಿದ ತಾಲ್ಲೂಕುಗಳಲ್ಲಿ ನಿರ್ಬಂಧ ಸಡಿಲಗೊಳಿಸಿರುವುದು ನಿರಾಶೆಯುಂಟು ಮಾಡಿದೆ. ಕಿತ್ತಳೆ ವಲಯಕ್ಕೆ ಕಾಲಿಟ್ಟಿದ್ದರಿಂದ ಲಾಕ್‌ಡೌನ್ ಸಡಿಲ ಮಾಡಲಾಗಿದೆ ಎಂದುಕೊಂಡ ಜನರು, ಸೋಮವಾರ ಬೆಳಿಗ್ಗೆಯಿಂದ ರಸ್ತೆಗಳ ತುಂಬ ಓಡಾಡುತ್ತಿದ್ದರು. ವಾಹನಗಳ ಓಡಾಟವನ್ನು ನೋಡಿದರೆ ಬೆರಗಾಗುವಂತಿತ್ತು.
ವಿವಿಧೆಡೆ ತೆರಳುವವರು ಪಾಸ್ ಪಡೆದುಕೊಳ್ಳಲು ತಹಶೀಲ್ದಾರ್ ಕಚೇರಿಯಲ್ಲಿ 200ಕ್ಕೂ ಹೆಚ್ಚು ಜನರು ಸೇರಿದ್ದರು. ಯಾವುದೇ ಅಂತರಕಾಯ್ದುಕೊಳ್ಳದೇ ಜಮಾಯಿಸಿದ್ದು ಕಂಡುಬಂತು. ಹಲವು ಬ್ಯಾಂಕ್‌ಗಳಲ್ಲಿ ನೂರಾರು ಜನರು ಸೇರಿದ್ದರು.
ಕಟ್ಟುನಿಟ್ಟಿನ ಲಾಕ್‌ಡೌನ್
ಭಟ್ಕಳದಲ್ಲಿಮತ್ತೆ ಕೋವಿಡ್ 19 ಪ್ರಕರಣಗಳು ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಪಟ್ಟಣದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳು ಎಂದಿನಂತೆ ತೆರೆಯಲು ಅವಕಾಶ ನೀಡಲಾಗಿದೆ. ತಾಲ್ಲೂಕಿನ ಶಿರಾಲಿ, ಕಾಯ್ಕಿಣಿ, ಮುರ್ಡೇಶ್ವರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟ ಸೇರಿದಂತೆ ಎಲ್ಲ ರೀತಿಯ ವ್ಯವಹಾರಗಳಿಗೆಅವಕಾಶ ನೀಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಭರತ್.ಎಸ್ ಮಾಹಿತಿ ನೀಡಿದರು.
‘ಭಟ್ಕಳದಲ್ಲಿ ಲಾಕ್‌ಡೌನ್ಮುಂದುವರಿಸುವುದು ಅತ್ಯಗತ್ಯವಾಗಿದೆ. ಪಟ್ಟಣ ಪ್ರದೇಶದಲ್ಲಿ ಮಾತ್ರ ಕಟ್ಟುನಿಟ್ಟಾಗಿರಲಿದ್ದು, ಈ ಹಿಂದೆ ಇದ್ದಂತೆ ನಿಯಮಗಳು ಜಾರಿಯಲ್ಲಿರುತ್ತದೆ. ಆದರೆ, ಹಳ್ಳಿಗಳಲ್ಲಿ ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದು ಡಿ.ವೈ.ಎಸ್.ಪಿ ಗೌತಮ್ ಹೇಳಿದರು.
ರಂಜಾನ್ ವಹಿವಾಟಿಗೆ ಧಕ್ಕೆ
ರಂಜಾನ್ ಉಪವಾಸ ವ್ರತಾಚರಣೆ ಆರಂಭವಾಗಿ ಈಗಾಗಲೇ 10 ದಿನಗಳು ಕಳೆದಿವೆ.ಈ ಸಂದರ್ಭದಲ್ಲಿ ಭಟ್ಕಳದಲ್ಲಿ ಮುಸ್ಲಿಮ್ ಸಮುದಾಯದವರ ವ್ಯಾಪಾರ ವಹಿವಾಟು ಭರ್ಜರಿಯಾಗಿರುತ್ತಿತ್ತು. ಪಟ್ಟಣದ ಮುಖ್ಯರಸ್ತೆಯಲ್ಲಿ ರಂಜಾನ್ಪೇಟೆ ತೆರೆದುಕೊಂಡು ಜನಜಂಗುಳಿಯೇ ಸೇರುತ್ತಿತ್ತು. ಆದರೆ, ಈ ವರ್ಷ ಕೊರೊನಾ ವೈರಸ್ ಮತ್ತು ಲಾಕ್‌ಡೌನ್ ಎಲ್ಲದಕ್ಕೂ ತಡೆಯೊಡ್ಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.