ಶಿರಸಿ: ಗ್ಯಾರಂಟಿ ಯೋಜನೆ ಬಿಜೆಪಿಯದ್ದು ಎಂದು ನಂಬಿಸಿ ಮಹಿಳೆಯರನ್ನು ತಪ್ಪು ದಾರಿಗೆ ಎಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
ಬನವಾಸಿಯಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಲೋಕಸಭಾ ಚುನಾವಣಾ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳಿಗೆ ಸಾಕಷ್ಟು ಹಣ ಖರ್ಚು ಮಾಡಿದೆ. ಪ್ರತಿ ಮನೆಗೆ ಪ್ರತಿ ತಿಂಗಳು ಕನಿಷ್ಠ ₹ 5,000 ಹೋಗುತ್ತಿದೆ. ಆದರೆ ಈ ವಿಚಾರವಾಗಿ ಹೆಣ್ಣು ಮಕ್ಕಳನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಹಣ ಬಿಜೆಪಿ ಕೊಡುತ್ತಿದೆ ಎಂದು ಹೇಳುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಈ ಗ್ಯಾರಂಟಿ ನಮ್ಮದು ಎಂದು ಧೈರ್ಯವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕಿದೆ’ ಎಂದರು.
‘ಚುನಾವಣೆ ಬಹಳ ಸುಲಭವೆಂದು ಸುಮ್ಮನಿರಬಾರದು. ಕಾಂಗ್ರೆಸ್‍ನ ನಿಷ್ಠಾವಂತ ಸೈನಿಕರಾಗಿ ದುಡಿಯಬೇಕಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಜನರಿಗೆ ತಿಳಿಹೇಳಬೇಕಿದೆ. ಸುಳ್ಳು ಭರವಸೆ ನಮ್ಮದಲ್ಲ. ಮನ್ ಕಿ ಬಾತ್ ಅಲ್ಲ, ಜನ್ ಕಿ ಬಾತ್ ಕೇಳಿ ರಾಹುಲ್ ಗಾಂಧಿಯವರು ಪಂಚ ನ್ಯಾಯ ಘೋಷಿಸಿದ್ದಾರೆ’ ಎಂದ ಅವರು, ‘ಬನವಾಸಿಯ ನೀರಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಮನೆಮಗಳಂತೆ ಕೆಲಸ ಮಾಡಿ ಆಶೀರ್ವಾದ ಮಾಡಿ’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ವಿ.ಎಸ್. ಪಾಟೀಲ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿನಾಥ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎಂ. ನಾಯ್ಕ ಇದ್ದರು. ಬನವಾಸಿ ಬ್ಲಾಕ್ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಸೇರಿದಂತೆ ವಿವಿಧ ಘಟಕಗಳಿಂದ ಡಾ.ಅಂಜಲಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಹಲವು ಜೆಡಿಎಸ್ ಯುವ ನಾಯಕರನ್ನು ಕಾಂಗ್ರೆಸ್ ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಸಭೆ ಬಳಿಕ ಡಾ.ಅಂಜಲಿ ನಿಂಬಾಳ್ಕರ್ ಅವರು ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಈ ವೇಳೆ ಅರ್ಚಕರು ನಿಂಬಾಳ್ಕರ್ ಅವರು ಲೋಕಸಭಾ ಕ್ಷೇತ್ರದ ಸಂಸದರಾಗಲಿ ಎಂದು ಅರ್ಚನೆಗೈದರು. ಮಧುಕೇಶ್ವರ ದೇವಾಲಯದ ಸಮಿತಿಯಿಂದ ಅವರಿಗೆ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.