ಶಿರಸಿ: 'ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರದಲ್ಲಿ ಭಾಗವಹಿಸುವ ವಾತಾವರಣ ಅವರೇ ಇಟ್ಟಿಲ್ಲ. ಅವರಿಗೇ ನಾವು ಬೇಡ ಅಂದರೆ ನಾವ್ಯಾಕೆ ಅವರ ಪರ ಮತ ಕೇಳಬೇಕು?' ಎಂದು ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದರು.
ನಗರದಲ್ಲಿ ಶನಿವಾರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಜಿಲ್ಲಾ ಪ್ರಚಾರದ ಜಾಹೀರಾತುಗಳಲ್ಲಿ ನನ್ನ ಹಾಗೂ ಶಾಸಕ ದಿನಕರ ಶೆಟ್ಟಿ ಅವರ ಫೋಟೊ ತೆಗೆಯಲಾಗಿದೆ. ಈಗಾಗಲೇ ನನಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವರಿಷ್ಠರ ಬಳಿ ತಿಳಿಸಿದ್ದೇನೆ. ಆದರೆ ಈವರೆಗೆ ಸರಿಯಾದ ಸ್ಪಂದನೆಯಿಲ್ಲ. ನೀರು ಹರಿದು ಹೋದ ಮೇಲೆ ಕಟ್ಟೆ ಹಾಕಿ ಏನು ಪ್ರಯೋಜನ? ನೀರು ನಿಲ್ಲಬೇಕು ಅಂದರೆ ಮೊದಲೇ ಕಟ್ಟೆ ಹಾಕಬೇಕು. ಹರಿದುಹೋದ ಮೇಲೆ ಕಟ್ಟೆ ಒಂದೇ ಉಳಿಯುತ್ತೆ. ಈಗ ಕ್ಷೇತ್ರದಲ್ಲಿ ಬಿಜೆಪಿ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ' ಎಂದರು.
'ಕ್ಷೇತ್ರದಲ್ಲಿ ಹೆಬ್ಬಾರ್ ಮಾಡಬಾರದ್ದನ್ನು ಮಾಡಿದರು ಎಂದವರಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೇನೆ. ಈಗ ಅವರ ಸ್ಪಷ್ಟೀಕರಣದ ನಿರೀಕ್ಷೆಯಲ್ಲಿದ್ದೇನೆ. ರಾಜ್ಯ, ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬಂದ ವೇಳೆ ಭಾಗವಹಿಸಬೇಕೇ, ಬೇಡವೇ ಎಂಬ ಬಗ್ಗೆ ವಿಚಾರ ಮಾಡುತ್ತಿದ್ದೇನೆ' ಎಂದು ಹೇಳಿದರು.
ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, 'ರಾಜಕಾರಣದಲ್ಲಿ ಇವೆಲ್ಲ ಇದ್ದಿದ್ದೇ. ಯಾರು ಯಾವ ಪಕ್ಷದಲ್ಲಿ ಬೇಕಾದರೂ ಇರಬಹುದು. ರಾಜಕಾರಣದಲ್ಲಿ ಇಂಥ ಘಟನೆಗಳು ನಡೆಯುತ್ತಲೇ ಇರುತ್ತವೆ. ಮನೆಯಲ್ಲಿ ಕುಳಿತರೆ ಯಾರೂ ಏನೂ ತಂದುಕೊಡಲ್ಲ. ಶ್ರಮಪಟ್ಟು ದುಡಿಬೇಕು, ಶ್ರಮಪಟ್ಟು ಮೇಲೆ ಹೋಗಬೇಕು' ಎಂದರು.
ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ಇಂಥ ಹೇಯ ಕೃತ್ಯ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂಥವರನ್ನು ನೇಣು ಹಾಕಬೇಕು ಇಲ್ಲವೇ ಎಂಥ ಕಠಿಣ ಕಾನೂನು ಇದೆಯೋ ಅದನ್ನು ವಿಧಿಸಬೇಕು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.