ಯಲ್ಲಾಪುರ: ತಾಲ್ಲೂಕಿನ ಪಣಸಗುಳಿಯ ತಾತ್ಕಾಲಿಕ ಸೇತುವೆಯಿಂದ ಬುಧವಾರ ಗಂಗಾವಳಿ ನದಿಗೆ ಉರುಳಿದ ಲಾರಿಯನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯು ಗುರುವಾರ ಆರಂಭವಾಗಿದೆ. ಲಾರಿಯೊಂದಿಗೆ ಒಬ್ಬ ನಾಪತ್ತೆಯಾಗಿದ್ದು, ಹುಡುಕಾಟ ಮುಂದುವರಿದಿದೆ.
ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್.ಡಿ.ಆರ್.ಎಫ್) ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಬುಧವಾರ ಸಂಜೆ ಅವಘಡ ಸಂಭವಿಸಿದ್ದು, ಕತ್ತಲಾದ ಬಳಿಕ ಕಾರ್ಯಾಚರಣೆ ನಿಲ್ಲಿಸಲಾಗಿತ್ತು.
'ನದಿಯಲ್ಲಿ ನೀರಿನ ಹರಿವು ಸ್ವಲ್ಪ ಕಡಿಮೆಯಾಗಿದ್ದು, ಲಾರಿಯ ಕ್ಯಾಬಿನ್‌ನ ಮೇಲ್ಭಾಗ ಕಾಣತೊಡಗಿದೆ. ಕ್ರೇನ್ ಬಳಸಿ ಲಾರಿಯನ್ನು ಮೇಲಕ್ಕೆತ್ತಲಾಗುವುದು. ಕಾಣೆಯಾದ ವ್ಯಕ್ತಿ ಲಾರಿಯಲ್ಲಿ ಇಲ್ಲದಿದ್ದರೆ ಹುಡುಕಾಟಕ್ಕಾಗಿ ಕಾರ್ಯಾಚರಣೆ ಮುಂದುವರಿಸಲಾಗುವುದು' ಎಂದು ಯಲ್ಲಾಪುರ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.
ಅಂಕೋಲಾ ತಾಲ್ಲೂಕಿನ ಹೆಗ್ಗಾರಕ್ಕೆ ಚಿರೆಕಲ್ಲು ಸಾಗಿಸಿ ವಾಪಸ್ ಬರುತ್ತಿದ್ದ ಲಾರಿಯು ತಾತ್ಕಾಲಿಕ ಸೇತುವೆಯಿಂದ ನದಿಗೆ ಉರುಳಿತ್ತು. ಲಾರಿಯಲ್ಲಿದ್ದ ಆರು ಮಂದಿಯಲ್ಲಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದರು. ಒಬ್ಬರು ಲಾರಿಯೊಂದಿಗೇ ನೀರು ಪಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.