ಶಿರಸಿ: ‘ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಿತ್ತೂರಿನ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ ಅವರು ಗ್ಯಾರಂಟಿ ಕಾರ್ಡ್‍ಗಳ ಜತೆ ಮತಕ್ಕಾಗಿ ಹಣ ಹಂಚುತ್ತಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ’ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
‘ಕಾಂಗ್ರೆಸ್ ಸದಾಕಾಲ ಚುನಾವಣಾ ಬಾಹಿರ ಕೃತ್ಯದಲ್ಲಿ ತೊಡಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಕಿತ್ತೂರಿನ ನೇಸರಗಿ ಭಾಗದಲ್ಲಿ ಮತದಾರರಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜೊತೆಗೆ ಹಣವನ್ನೂ ಹಂಚಲಾಗಿದೆ. ಈ ಕುರಿತ ವಿಡಿಯೊ ಕೂಡ ಲಭ್ಯವಿದೆ. ಸ್ವತಃ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಿತ್ರಗಳಲ್ಲೂ ಕಾಣುತ್ತಿದೆ. ಸೋಲಿನ ಹತಾಶೆಯಿಂದ ಮತಗಳ ಖರೀದಿಗೆ ಕಾಂಗ್ರೆಸ್ ಮುಂದಾಗಿರುವುದು ಖಂಡನೀಯ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕವೂ ಸೋಮವಾರ ಹೊನ್ನಾವರದ ಮುಗ್ವಾ, ಅಂಕೋಲಾ, ಕಾರವಾರ, ಸಿದ್ದಾಪುರಗಳಲ್ಲಿ ಬಹಿರಂಗ ಸಭೆ ಕೂಡ ನಡೆಸಲಾಗಿದೆ. ಇವೆಲ್ಲವುಗಳ ಬಗ್ಗೆ ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತಂದರೂ ರಾಜ್ಯ ಸರ್ಕಾರದ ಭಯದ ಕಾರಣ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿ, ಚುನಾವಣಾ ವೀಕ್ಷಕರು, ಆಯೋಗಕ್ಕೆ ದೂರು ಸಲ್ಲಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.