ADVERTISEMENT

ಕಾರವಾರ: ‘ಮೈಂಗಿಣಿ’ ವಾಸಿಗಳಿಗೆ ವಲಸೆ ಅನಿವಾರ್ಯ

ರಾಜ್ಯದ ಕೊನೆಯ ಊರಿಗಿಲ್ಲ ಬಸ್, ನೀರಾವರಿ ಸೌಲಭ್ಯ

ಗಣಪತಿ ಹೆಗಡೆ
Published 16 ಅಕ್ಟೋಬರ್ 2024, 5:30 IST
Last Updated 16 ಅಕ್ಟೋಬರ್ 2024, 5:30 IST
ಕಾರವಾರ ತಾಲ್ಲೂಕಿನ ಮೈಂಗಿಣಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಿರಿದಾದ ಕಚ್ಚಾ ರಸ್ತೆ
ಕಾರವಾರ ತಾಲ್ಲೂಕಿನ ಮೈಂಗಿಣಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಿರಿದಾದ ಕಚ್ಚಾ ರಸ್ತೆ   

ಕಾರವಾರ: ‘ಚುನಾವಣೆ ಬಂದಾಗಷ್ಟೆ ಜನಪ್ರತಿನಿಧಿಗಳಿಗೆ ತಮ್ಮೂರಿನ ನೆನಪಾಗುತ್ತದೆ. ಬಳಿಕ ಮರೆತು ಹೋಗುತ್ತದೆ. ಸೌಕರ್ಯಕ್ಕಾಗಿ ಹಲವು ವರ್ಷ ಕಾದರೂ ಆಡಳಿತ ವ್ಯವಸ್ಥೇಯ ದೃಷ್ಟಿ ನಮ್ಮತ್ತ ಬಿದ್ದಿಲ್ಲ. ಉದ್ಯೋಗದಿಂದ ಆರೋಗ್ಯದ ವರೆಗೆ ಗೋವಾ ಅವಲಂಭಿಸುವ ಸ್ಥಿತಿ ಇದೆ. ಇದು ವಲಸೆಗೂ ಕಾರಣವಾಗುತ್ತಿದೆ’

ಹೀಗೆ ಕೊಂಕಣಿ ಮಿಶ್ರಿತ ಕನ್ನಡದಲ್ಲಿ ತಾಲ್ಲೂಕಿನ ಮೈಂಗಿಣಿ ಗ್ರಾಮದ ದುಸ್ಥಿತಿ ವಿವರಿಸಿದರು ಗ್ರಾಮಸ್ಥ ನೀಲೇಶ ಗಾಂವಕಾರ. ಮೈಂಗಿಣಿ ರಾಜ್ಯದ ಗಡಿಭಾಗದ ಕೊನೆಯ ಊರು. ಇಲ್ಲಿನ ಹತ್ತಾರು ಕುಟುಂಬಗಳು ಈಗಾಗಲೆ ಊರು ತೊರೆದು ಗೋವಾದ ವಿವಿಧೆಡೆ ನೆಲೆನಿಂತಿದೆ. ಸೌಕರ್ಯ ರಹಿತ ಗ್ರಾಮದ ಸ್ಥಿತಿಯೇ ಇದಕ್ಕೆಲ್ಲ ಕಾರಣ ಎಂಬುದಾಗಿ ಇಲ್ಲಿನ ಜನರು ಹೇಳುತ್ತಾರೆ.

‘ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮವು ಕಾರವಾರವಷ್ಟೆ ಅಲ್ಲದೆ, ಕರ್ನಾಟಕದ ಕೊನೆಯ ಊರು. ನಮ್ಮೂರಿನಿಂದ ಸರಿಯಾಗಿ ಎರಡು ಕಿ.ಮೀ ಕಾಡಿನ ದಾರಿಯಲ್ಲಿ ಸಾಗಿದರೆ ಗೋವಾದ ಬಾಳಿ ಸಿಗುತ್ತದೆ. ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯಿಂದ ಗೋಪಶಿಟ್ಟಾ ಸಮೀಪ ಒಳ ರಸ್ತೆಯಲ್ಲಿ ನಾಲ್ಕು ಕಿ.ಮೀ ಸಾಗಿ ಮೈಂಗಿಣಿಗೆ ಬರಬೇಕು. ಸ್ವಲ್ಪ ದೂರ ಡಾಂಬರು ರಸ್ತೆ ಇದ್ದರೆ, ಇನ್ನುಳಿದ ಭಾಗ ಡಾಂಬರು ಕಿತ್ತುಹೋದ, ಕಚ್ಚಾ ರಸ್ತೆಯೇ ಇದೆ. ವಾಹನಗಳ ಸಂಚಾರಕ್ಕೆ ಕಷ್ಟವಾಗುತ್ತದೆ’ ಎಂದು ನೀಲೇಶ್ ಹೇಳಿದರು.

ADVERTISEMENT

‘25 ಮನೆಗಳಿರುವ ಊರಿನಲ್ಲಿ 160ರಷ್ಟು ಜನಸಂಖ್ಯೆ ಇದೆ. ಗ್ರಾಮದಲ್ಲಿರುವ ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ನಾಲ್ಕು ಕಿ.ಮೀ ದೂರ ಕಾಲ್ನಡಿಗೆಯಲ್ಲೋ, ಸೈಕಲ್ ತುಳಿದೊ ಮುಖ್ಯರಸ್ತೆಗೆ ಸಾಗಿ, ಅಲ್ಲಿಂದ ಬಸ್ ಏರಬೇಕಾಗಿದೆ. ಗ್ರಾಮಕ್ಕೆ ಬಸ್ ಸೌಲಭ್ಯ ಈವರೆಗೆ ಕಲ್ಪಿಸಿಲ್ಲ’ ಎಂದೂ ಸಮಸ್ಯೆ ಹೇಳಿದರು.

‘ಕೃಷಿ ಭೂಮಿ ಇದ್ದರೂ ನೀರಾವರಿ ಸೌಲಭ್ಯ ಇಲ್ಲದ ಕಾರಣಕ್ಕೆ ಮಳೆಗಾಲ ಹೊರತುಪಡಿಸಿ, ಉಳಿದ ವೇಳೆ ಭೂಮಿ ಖಾಲಿ ಬೀಳುತ್ತದೆ. ಕೂಲಿಗೆ, ಉದ್ಯೋಗಕ್ಕೆ ಗೋವಾ ರಾಜ್ಯಕ್ಕೆ ತೆರಳುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಗ್ರಾಮದ ಹತ್ತಾರು ಯುವಕರು ನಿತ್ಯವೂ ಕಾಡು ದಾರಿಯ ಮೂಲಕ ಗೋವಾಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ. ಬೀದಿದೀಪಗಳು ಆಗೊಮ್ಮೆ ಈಗೊಮ್ಮೆ ಉರಿಯುತ್ತವೆ. ಹಾಳಾದರೆ ಅವುಗಳ ದುರಸ್ತಿ ನಡೆಯುವುದು ಅಪರೂಪಕ್ಕೊಮ್ಮೆ. ಜಲಜೀವನ್ ಮಿಷನ್ ಯೋಜನೆಯ ಫಲವೂ ಊರಿಗೆ ಸಿಕ್ಕಿಲ್ಲ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುವುದು ತಪ್ಪುತ್ತಿಲ್ಲ’ ಎಂದು ಗ್ರಾಮಸ್ಥರೊಬ್ಬರು ದೂರಿದರು.

ಉಪ್ಪು ನೀರು ನುಗ್ಗುವ ಆತಂಕ

ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕಡೆಗಳಲ್ಲಿ ಜಲಮೂಲಗಳು ನವೆಂಬರ್ ಬಳಿಕ ಸವುಳಾಗುವ ಸಮಸ್ಯೆ ಎದುರಿಸುತ್ತಿವೆ. ಗ್ರಾಮದ ಪಕ್ಕದಲ್ಲೇ ಹರಿಯುವ ಕಾಳಿನದಿಯ ಉಪ್ಪುನೀರು ಜಲಮೂಲಗಳಿಗೆ ನುಗ್ಗಿ ಈ ಸಮಸ್ಯೆ ಸೃಷ್ಟಿಯಾಗುತ್ತಿದೆ. ‘ಅಂಬಿಗವಾಡಾ ಬಾಬುನಾಯ್ಕ ವಾಡಾ ಜನತಾ ಕಾಲೊನಿ ಸೇರಿ ಹಲವು ಕಡೆಯಲ್ಲಿ ಬಾವಿಗಳಿಗೆ ಉಪ್ಪುನೀರು ನುಗ್ಗುತ್ತಿದೆ. ಖಾರಲ್ಯಾಂಡ್ ಒಡ್ಡು ಸರಿಯಾಗಿ ನಿರ್ವಹಣೆಯಾಗದೆ ಕೃಷಿಭೂಮಿಗೂ ನೀರು ನುಗ್ಗುತ್ತಿರುವುದರಿಂದ ಕೃಷಿ ಚಟುವಟಿಕೆ ಸ್ಥಗಿತವಾಗಿದೆ’ ಎನ್ನುತ್ತಾರೆ ಗ್ರಾಮಸ್ಥ ಜಗದೀಶ ಗಂಗೆಪುತ್ರ.

ಮೈಂಗಿಣಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮರುನಿರ್ಮಾಣಕ್ಕೆ ದೊಡ್ಡ ಮೊತ್ತದ ಅಗತ್ಯವಿರುವ ಕಾರಣ ಗ್ರಾಮ ಪಂಚಾಯಿತಿ ಅನುದಾನ ಸಾಲುತ್ತಿಲ್ಲ. ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆ ಕಾರ್ಯಗತಗೊಳ್ಳುವ ಹಂತದಲ್ಲಿದ್ದು ಶೀಘ್ರವೆ ಕೆಲಸ ಆರಂಭವಾಗಲಿದೆ.
ಮಹೇಶ ಗಾವಡೆ, ಹಣಕೋಣ ಗ್ರಾಮ ಪಂಚಾಯಿತಿ ಪಿಡಿಒ
ಮೈಂಗಿಣಿ ಗ್ರಾಮದ ಕೊನೆಯಲ್ಲಿರುವ ಗೋವಾ ರಾಜ್ಯದ ಬಾಳಿಯ ಚೆಕ್‍ಪೋಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.