ಕಾರವಾರ: ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಶತಕ ದಾಟಿದೆ. ಕೋವಿಡ್ ಅವಧಿಗೆ ಹೋಲಿಸಿದರೆ ಸದ್ಯ ಪ್ರಮಾಣ ಕಡಿಮೆಯಾಗಿದೆ.
ಆರು ತಿಂಗಳಿನಿಂದ ಮೂರು ವರ್ಷದವರೆಗೆ, ಮೂರು ವರ್ಷದಿಂದ ಆರು ವರ್ಷದೊಳಗಿನ ಮಕ್ಕಳ ದೇಹತೂಕ, ಬೆಳವಣಿಗೆ ಪ್ರಮಾಣ ಗಮನಿಸಿ ಮಗು ಪೌಷ್ಟಿಕತೆ ಹೊಂದಿದೆಯೋ, ಇಲ್ಲವೋ ಎಂಬುದನ್ನು ಗುರುತಿಸಲಾಗುತ್ತದೆ. ಅಂಗನವಾಡಿಗಳಿಗೆ ದಾಖಲಾದ ಮಕ್ಕಳಷ್ಟೆ ಅಲ್ಲದೆ, ಪ್ರತಿ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಮಕ್ಕಳ ತೂಕದ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ನಡೆಸುತ್ತಾರೆ.
ಜಿಲ್ಲೆಯಲ್ಲಿ ಆರು ತಿಂಗಳಿನಿಂದ ಆರು ವರ್ಷದೊಳಗಿನ 88,120 ಮಕ್ಕಳಿದ್ದು, ಅವರ ಪೈಕಿ 103 ಮಕ್ಕಳು ತೀವೃ ಅಪೌಷ್ಟಿಕತೆಯಿಂದ ಬಳಲುತ್ತಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸುವ ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಹಳಿಯಾಳ, ಅಂಕೋಲಾ, ಮುಂಡಗೋಡದಲ್ಲಿ ಹೆಚ್ಚು ಅಪೌಷ್ಟಿಕ ಮಕ್ಕಳು ಪತ್ತೆಯಾಗಿವೆ.
‘ಆರು ವರ್ಷದೊಳಗಿನ ಮಕ್ಕಳ ಬೆಳವಣಿಗೆಯ ಪ್ರತಿ ಹಂತದಲ್ಲಿಯೂ ಇಲಾಖೆ ನಿಗಾ ಇಡುತ್ತದೆ. ಅಂಗನವಾಡಿ ಕಾರ್ಯಕರ್ತೆಯರು ಮಗುವಿನ ಆರೋಗ್ಯ ಮಾಹಿತಿಯನ್ನೂ ಕಲೆಹಾಕುತ್ತಾರೆ. ಅಂಗನವಾಡಿಗ ಬರುವ ಮಕ್ಕಳ ತೂಕವನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ. ಜನವರಿ ತಿಂಗಳಿನಲ್ಲಿ ನಡೆದ ಸಮೀಕ್ಷೆಯಲ್ಲಿ 103 ಮಕ್ಕಳು ಕಡಿಮೆ ತೂಕದಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಆದರೆ, ಒಟ್ಟಾರೆ ಮಕ್ಕಳ ಸಂಖ್ಯೆಗೆ ಹೋಲಿಸಿದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಶೇ.0.11 ರಷ್ಟು ಮಾತ್ರವಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್.ಕುಕನೂರ ‘ಪ್ರಜಾವಾಣಿ’ಗೆ ತಿಳಿಸಿದರು.
‘ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚುವರಿ ಪೋಷಕಾಂಶ ಒದಗಿಸಲಾಗುತ್ತದೆ. ಇದನ್ನು ಆಹಾರದ ಮೂಲಕವೇ ಕೊಡಲಾಗುತ್ತದೆ. ಮೂರರಿಂದ ಆರು ವರ್ಷದ ಸಾಮಾನ್ಯ ಮಕ್ಕಳಿಗೆ ಅಂಗನವಾಡಿಗಳಲ್ಲಿ ವಾರಕ್ಕೆ ಎರಡು ದಿನ ಮೊಟ್ಟೆ ನೀಡಿದರೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಐದು ದಿನ ಮೊಟ್ಟೆ ನೀಡಲಾಗುತ್ತದೆ. ಜತೆಗೆ ಒಂದೂವರೆ ಪಟ್ಟು ಹೆಚ್ಚು ಆಹಾರ ಕೊಡಲಾಗುತ್ತದೆ. ಮೂರು ವರ್ಷದೊಳಗಿನವರಿಗೆ ಸಿರಿಧಾನ್ಯದ ಹಿಟ್ಟು ಪೂರೈಸಲಾಗುತ್ತದೆ’ ಎಂದು ತಿಳಿಸಿದರು.
‘ಕೋವಿಡ್ ಅವಧಿಯಲ್ಲಿ ಜಿಲ್ಲೆಯಲ್ಲಿ 209 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲಿದ್ದರು. ಇಲಾಖೆಯಿಂದ ಅವರಿಗೆ ಪೌಷ್ಟಿಕ ಆಹಾರ ಪೂರೈಸುವ ಜತೆಗೆ ಆರೋಗ್ಯದ ಮೇಲೆ ನಿಗಾ ಇರಿಸಿದ್ದ ಪರಿಣಾಮ ಈಗ ಅವರ ಸಂಖ್ಯೆ ಇಳಿಕೆಯಾಗಿದೆ’ ಎಂದೂ ಹೇಳಿದರು.
ತಾಲ್ಲೂಕು; ಮಕ್ಕಳ ಸಂಖ್ಯೆ
ಹಳಿಯಾಳ; 16
ಶಿರಸಿ; 14
ಅಂಕೋಲಾ; 14
ಮುಂಡಗೋಡ; 13
ಕುಮಟಾ; 12
ಜೊಯಿಡಾ; 12
ಸಿದ್ದಾಪುರ; 08
ಹೊನ್ನಾವರ; 07
ಯಲ್ಲಾಪುರ; 05
ಭಟ್ಕಳ; 01
ಕಾರವಾರ: 01
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.