ಅಂಕೋಲಾ: ಕೋವಿಡ್ ಮತ್ತಿತರ ಕಾರಣಗಳಿಂದ ಮಾರುಕಟ್ಟೆ ಅಭಾವ ಎದುರಿಸುತ್ತಿರುವ ಮಾವು ಬೆಳೆಗಾರರು, ಹೆದ್ದಾರಿ ಅಂಚುಗಳಲ್ಲಿಯೇ ಇದೀಗ ಮಾರುಕಟ್ಟೆ ಕಂಡುಕೊಂಡಿದ್ದಾರೆ. ಕೆಲವರು ವೆಚ್ಚಕ್ಕೆ ಸಮನಾದ ಆದಾಯವನ್ನೂ ಗಳಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮುಂಡಗೋಡ ತಾಲ್ಲೂಕು ಹೊರತುಪಡಿಸಿದರೆ ಅಂಕೋಲಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಾವು ಬೆಳೆಯಲಾಗುತ್ತದೆ. ಇಲ್ಲಿನ ‘ಕರಿ ಇಶಾಡ್’ ತಳಿ ಐತಿಹಾಸಿಕ ಪ್ರಸಿದ್ಧಿ ಹೊಂದಿದೆ. ರಾಜ್ಯದ ಇತರೆಡೆ ಈ ತಳಿಯ ಮಾವು ಬೆಳೆದರೂ ಇಲ್ಲಿನ ಭೌಗೋಳಿಕ ಲಕ್ಷಣಗಳು ಮತ್ತು ಮಣ್ಣಿನ ಗುಣದಿಂದಾಗಿ, ವಿಶಿಷ್ಟ ರುಚಿಯನ್ನು ಹೊಂದಿದೆ. ಈ ಕಾರಣಗಳಿಂದ ಕರ್ನಾಟಕ ಜೀವವೈವಿಧ್ಯ ಮಂಡಳಿ ‘ಜಿ.ಐ’ (ಜಿಯೋಗ್ರಾಫಿಕಲ್ ಇಂಡಿಕೇಶನ್) ಮಾನ್ಯತೆಗೆ ಶಿಫಾರಸು ಮಾಡಿದ್ದು, ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಅತಿ ಕಡಿಮೆ ಅವಧಿಯ ಬಾಳಿಕೆ ಹೊಂದಿರುವ ಮಾವನ್ನು ಸಂಗ್ರಹಿಸುವುದು ಬೆಳೆಗಾರರಿಗೆ ಕಷ್ಟವಾಗಿದೆ. ಈ ಹಿಂದೆ ಹುಬ್ಬಳ್ಳಿ, ಬೆಂಗಳೂರು, ಗೋವಾ, ಮಹಾರಾಷ್ಟ್ರ ಸೇರಿದಂತೆ ಹಲವು ಪ್ರದೇಶಗಳಿಗೆ ಇಲ್ಲಿನ ಮಾವು ರಫ್ತಾಗುತ್ತಿತ್ತು. ಕೋವಿಡ್ ಕಾರಣದಿಂದ ಮಾವಿನ ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳು ನಷ್ಟ ಅನುಭವಿಸಿದ್ದರು. ಮತ್ತೆ ಮಾವಿನ ವಹಿವಾಟಿಗೆ ಮುಂದಾಗದೇ ಸ್ಥಳೀಯ ಬೆಳೆಗಾರರು ಕಂಗಾಲಾಗಿದ್ದರು.
ರಾಷ್ಟ್ರೀಯ ಹೆದ್ದಾರಿ 63 ಮತ್ತು 66, ಗೋಕರ್ಣ– ಹೊಸಕಂಬಿ ರಾಜ್ಯ ಹೆದ್ದಾರಿ ಇಕ್ಕೆಲಗಳಲ್ಲಿ ದಿನನಿತ್ಯ 300ಕ್ಕೂ ಅಧಿಕ ಬೆಳೆಗಾರರು ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಬೆಳಸೆ ಹಂದಿಗದ್ದೆಯ ರೈಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ನೂರಾರು ಬೆಳೆಗಾರರು ಮಾರಾಟದಲ್ಲಿ ತೊಡಗಿದ್ದು, ಸ್ವಾಭಾವಿಕ ಮಾರುಕಟ್ಟೆ ನಿರ್ಮಾಣವಾಗಿದೆ. ಇಲ್ಲಿನ ಮಾರುಕಟ್ಟೆ ವಹಿವಾಟು ಗಮನಿಸಿ ಪಟ್ಟಣದ ಕೆಲವು ಮಾರಾಟಗಾರರೂ ಇಲ್ಲಿಗೆ ಲಗ್ಗೆ ಇಟ್ಟಿದ್ದಾರೆ.
‘ನಾವು ಐದು ವರ್ಷಗಳಿಂದ ರಸ್ತೆ ಬದಿಯಲ್ಲಿ ಮಾವು ಮಾರಾಟ ಮಾಡುತ್ತಿದ್ದೇವೆ. ನಿತ್ಯ 15ರಿಂದ 20 ಡಜನ್ ಬಿಕರಿಯಾಗುತ್ತಿದೆ. ಕೇರಳ ಮತ್ತು ಹುಬ್ಬಳ್ಳಿಯ ನಡುವೆ ನಿರಂತರವಾಗಿ ಸಂಚರಿಸುತ್ತಿರುವವರು ಕಾಯಂ ಗ್ರಾಹಕರಾಗಿದ್ದಾರೆ. ಮದುವೆ ಮತ್ತಿತರ ಸಮಾರಂಭಗಳಿಗೆ ಮಾವಿನ ಖಾದ್ಯ ತಯಾರಿಸಲು ಸಹ ಮುಂಚಿತವಾಗಿ ಇಲ್ಲಿಂದಲೇ ಮಾವು ಖರೀದಿಸುತ್ತಾರೆ’ ಎನ್ನುತ್ತಾರೆ ಕೊಳಗಿಯಲ್ಲಿ ಮಾವು ಮಾರಾಟ ಮಾಡುತ್ತಿರುವ ನಮಿತಾ ಹಿಲ್ಲೂರು.
ಏನಿದು ‘ಜಿ.ಐ ಟ್ಯಾಗ್’?
ಕೃಷಿ, ಇತರ ಸರಕುಗಳ ವಿಶಿಷ್ಟ ಗುಣ, ಮೂಲ ಮತ್ತು ಪಾರಂಪರಿಕ ಇತಿಹಾಸವನ್ನು ಅವಲೋಕಿಸಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಭೌಗೋಳಿಕ ಸೂಚನೆಯ ಮಾನ್ಯತೆ ನೀಡುತ್ತದೆ.
ದೇಶಿ ಸರಕುಗಳ ರಫ್ತಿಗೆ ಇದು ಉತ್ತೇಜನ ನೀಡುತ್ತದೆ. ದೇಶದಲ್ಲಿ ಈಗಾಗಲೇ 300ಕ್ಕೂ ಅಧಿಕ ಸರಕುಗಳಿಗೆ ಈ ಮಾನ್ಯತೆ ನೀಡಲಾಗಿದೆ. ಕರ್ನಾಟಕವು ದೇಶದಲ್ಲಿಯೇ ಅತಿ ಹೆಚ್ಚು (47) ಜಿ.ಐ ಟ್ಯಾಗ್ ಪಡೆದಿದೆ. ಕರಿ ಇಶಾಡ್ ಮಾವಿಗೆ ಮಾನ್ಯತೆ ಸಿಕ್ಕಿದರೆ ಈ ಗುರುತು ಪಡೆದ ರಾಜ್ಯ ಕರಾವಳಿಯ ಮೊದಲ ಹಣ್ಣು ಎನಿಸಿಕೊಳ್ಳಲಿದೆ.
----
* ಕರಿ ಇಶಾಡ್ ಮಾವಿಗೆ ಜಿ.ಐ ಟ್ಯಾಗ್ ನೀಡಲು ಅವಶ್ಯ ದಾಖಲೆ ಕಲೆಹಾಕಿ ಸಲ್ಲಿಸಲು ಖಾಸಗಿ ಏಜೆನ್ಸಿಯನ್ನು ನೇಮಿಸಲಾಗಿದೆ. ಆರು ತಿಂಗಳಲ್ಲಿ ಪ್ರಕ್ರಿಯೆ ಪೂರ್ಣವಾಗಬಹುದು.
- ಚೇತನ ನಾಯ್ಕ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.