ADVERTISEMENT

ಹಳಿಯಾಳ: ಆಪೂಸ್ ಮಾವಿಗೆ ಕುಸಿದ ಬೇಡಿಕೆ

ಗ್ರಾಹಕರಿಗಾಗಿ ದಿನವಿಡೀ ಕಾಯುವ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 12 ಮೇ 2024, 4:12 IST
Last Updated 12 ಮೇ 2024, 4:12 IST
ಹಳಿಯಾಳದ ಸಾರಿಗೆ ನಿಲ್ದಾಣದ ಹತ್ತಿರ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವವರು ಗ್ರಾಹಕರಿಗಾಗಿ ಕಾಯುತ್ತಾ ಕುಳಿತಿರುವುದು
ಹಳಿಯಾಳದ ಸಾರಿಗೆ ನಿಲ್ದಾಣದ ಹತ್ತಿರ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವವರು ಗ್ರಾಹಕರಿಗಾಗಿ ಕಾಯುತ್ತಾ ಕುಳಿತಿರುವುದು   

ಹಳಿಯಾಳ: ಬಹು ಬೇಡಿಕೆಯಲ್ಲಿರುವ ಹಳಿಯಾಳದ ಆಪೂಸ್ (ಆಲ್ಫೊನ್ಸೋ) ಮಾವಿನ ಹಣ್ಣಿಗೆ ಪ್ರಸಕ್ತ ಸಾಲಿನಲ್ಲಿ ಬೇಡಿಕೆ ಇಲ್ಲದೆ ಮಾವಿನಹಣ್ಣಿನ ಮಾರಾಟಗಾರರು ಗ್ರಾಹಕರಿಗಾಗಿ ಕಾಯುವ ಸ್ಥಿತಿ ಬಂದೊದಗಿದೆ.

ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಮಾವಿನ ಕಾಯಿ, ಹಣ್ಣು ಪೇಟೆಯಲ್ಲಿ ಮಾರಾಟಕ್ಕೆ ಬರುತ್ತಿದೆ. ಈ ವರ್ಷ ಸ್ವಲ್ಪ ತಡವಾಗಿ ಮಾರಾಟಕ್ಕೆ ಬಂದರೂ, ತೀವ್ರ ಬಿಸಿಲಿನ ತಾಪಮಾನದಿಂದ ಮಾವಿನಕಾಯಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಇದು ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ.

ಗ್ರಾಮೀಣ ಭಾಗದಿಂದ ಮಾವಿನ ಹಣ್ಣುಗಳನ್ನು ಹೊತ್ತು ತರುವ ವ್ಯಾಪಾರಿಗಳು ಪಟ್ಟಣದ ಬಸ್ ನಿಲ್ದಾಣದ ಬಳಿ, ಮುಖ್ಯ ಬೀದಿಯಲ್ಲಿ ಮಾರಾಟಕ್ಕೆ ಇಟ್ಟು ಕುಳಿತುಕೊಳ್ಳುತ್ತಿದ್ದಾರೆ. ಬೇಡಿಕೆ ಕಡಿಮೆ ಇರುವ ಕಾರಣ ವ್ಯಾಪಾರಿಗಳು ದರ ಕಡಿಮೆ ನಿಗದಿ ಮಾಡಿದ್ದರೂ ಗ್ರಾಹಕರು ಚೌಕಾಸಿ ಮಾಡಿ ಇನ್ನಷ್ಟು ಕಡಿಮೆ ದರಕ್ಕೆ ಖರೀದಿಸತೊಡಗಿದ್ದಾರೆ.

ADVERTISEMENT

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾವಿನ ಬೆಳೆ ಕೊಂಡುಕೊಳ್ಳುವ ವ್ಯಾಪಾರಸ್ಥರು, ದಲಾಲರು ಕ್ವಿಂಟಲ್‍ಗೆ ₹3,000 ದಿಂದ ₹3,500 ವರೆಗೆ ಗರಿಷ್ಠ ಬೆಲೆ ನಿಗದಿಪಡಿಸುತ್ತಿದ್ದಾರೆ. ಮಾರುಕಟ್ಟೆಗೆ ಹಣ್ಣುಗಳನ್ನು ತಂದು ಮಾರುವ ವ್ಯಾಪಾರಸ್ಥರು ದೊಡ್ಡ ಗಾತ್ರದ ಆಪೂಸ್ ಹಣ್ಣಿಗೆ ₹250 ರಿಂದ ₹300, ಚಿಕ್ಕ ಗಾತ್ರದ ಮಾವಿನ ಹಣ್ಣು ₹100 ರಿಂದ ₹150 ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಪೈರಿ, ನೀಲಂ ಹಣ್ಣುಗಳು ಪ್ರತಿ ಡಜನ್ ಗೆ ₹150 ರಿಂದ ₹250 ದರಕ್ಕೆ ಮಾರಾಟ ಕಾಣುತ್ತಿದೆ.

‘ಪ್ರತಿ ಮಾವಿನ ಗಿಡ ಆರೈಕೆಗೆ ವರ್ಷಕ್ಕೆ ಕನಿಷ್ಠ ಒಂದು ಸಾವಿರ ರೂಪಾಯಿ ಖರ್ಚಾಗುತ್ತಿದೆ. ಕಾಯಿಗಳನ್ನು ಆರಂಭಿಕ ಹಂತದಲ್ಲೇ ಗುತ್ತಿಗೆ ನೀಡಲಾಗುತ್ತಿದೆ. ವ್ಯಾಪಾರಿಗಳು ಕಡಿಮೆ ದರಕ್ಕೆ ಖರೀದಿಸುತ್ತಿದ್ದಾರೆ’ ಎಂದು ಬಿ.ಕೆ ಹಳ್ಳಿ ಗ್ರಾಮದ ಮಾವು ಬೆಳೆಗಾರ ನಾಮದೇವ ಗೌಡ ಹೇಳಿದರು.

‘ಸಾಲ ಮಾಡಿ ಪ್ರತಿದಿನ ₹10-15 ಸಾವಿರದಷ್ಟು ಬೆಲೆ ಕಟ್ಟಿ ಮಾವಿನ ಹಣ್ಣುಗಳನ್ನು ರೈತರಿಂದ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದೇವೆ. ದೊಡ್ಡ ಗಾತ್ರದ ಹಣ್ಣುಗಳು ಬೇಗನೆ ಖರ್ಚಾಗುತ್ತಿವೆ. ಸಣ್ಣ ಗಾತ್ರದ ಹಣ್ಣುಗಳು ಹಾಗೆಯೇ ಉಳಿದು ಬಿಡುತ್ತಿವೆ. ಇದರಿಂದ ನಷ್ಟವೇ ಹೆಚ್ಚಾಗುತ್ತಿದೆ’ ಎಂದು ವ್ಯಾಪಾರಿಗಳಾದ ಮಂಜುಳಾ ವಡ್ಡರ, ಹುಲಿಗೆಮ್ಮ ಕೊರವರ, ಜಯಮ್ಮಾ ವಡ್ಡರ ಅಳಲು ತೋಡಿಕೊಂಡರು.

ಇಳುವರಿ ಶೇ 35 ರಷ್ಟು ಕುಸಿತ

‘ಹಳಿಯಾಳ ತಾಲ್ಲೂಕಿನಲ್ಲಿ ಸರ್ವೆ ಸಾಮಾನ್ಯವಾಗಿ ಆಪೂಸ್‌ (ಆಲ್ಫೊನ್ಸೋ) ನೀಲಂ ಪೈರಿ ಚಿತ್ರಾಪೈರಿ ತೋತಾಪುರಿ ಮಲ್ಲಿಕಾ ಮಲಗೊಬಾ ಕೇಸರ ಹಾಗೂ ಜವಾರಿ ಮಾವಿನ ಹಣ್ಣುಗಳನ್ನು ಬೆಳೆಸುತ್ತಾರೆ. ತಾಲ್ಲೂಕಿನಲ್ಲಿ ಒಟ್ಟು 889 ಹೆಕ್ಟೇರ್ ಮಾವಿನ ಬೆಳೆ ಬೆಳೆಸಲಾಗಿದ್ದು ಈ ವರ್ಷ ಬರಗಾಲದ ಪರಿಣಾಮ ಬೆಳೆ ಹಾನಿಯಾಗಿದೆ. ತೀವ್ರ ತಾಪಮಾನದಿಂದ ಮಾವಿನ ಗಿಡದಲ್ಲಿ ಬೆಳೆದಂತಹ ಹೂ ಕಾಯಿ ನೆಲಕ್ಕುರುಳಿ ಇಳುವರಿ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ಮಾವಿನ ಬೆಳೆ ಇಳುವರಿ ಶೇ 35ರಷ್ಟು ಕಡಿಮೆಯಾಗಿದ್ದು ಈ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕಳುಹಿಸಲಾಗಿದೆ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಎ.ಆರ್.ಹೆರಿಯಾಳ ತಿಳಿಸಿದರು.

ಹಳಿಯಾಳದ ಸಾರಿಗೆ ನಿಲ್ದಾಣದ ಹತ್ತಿರ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವವರು ಗ್ರಾಹಕರಿಗಾಗಿ ಕಾಯುತ್ತಾ ಕುಳಿತಿರುವುದು
ಹಳಿಯಾಳದ ಸಾರಿಗೆ ನಿಲ್ದಾಣದ ಬಳಿ ಮಾವಿನ ಹಣ್ಣು ಮಾರಟಕ್ಕೆ ತಂದಿರುವ ವ್ಯಾಪಾರಸ್ಥರು
ಹಳಿಯಾಳದ ಬೀದಿಗಳಲ್ಲಿ ಮಾವಿನ ಹಣ್ಣು ಮಾರಾಟ ಮಾಡುತ್ತಿರುವ ಗಂಗಾ ಗಂಗಾರಾಮ ಬೆಳಗಾಂಕರ ರವರಿಂದ ಗ್ರಾಹಕರೊಬ್ಬರು ಮಾವಿನ ಹಣ್ಣು ಖರೀದಿಸುತ್ತಿರುವುದು. 
ಹಳಿಯಾಳದ ಸಾರಿಗೆ ನಿಲ್ದಾಣದ ಹತ್ತಿರ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವವರು ಗ್ರಾಹಕರಿಗಾಗಿ ಕಾಯುತ್ತಾ ಕುಳಿತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.