ADVERTISEMENT

ನಡುಗಡ್ಡೆಯಲ್ಲಿ ‘ಕಾಂಡ್ಲಾ ನಡಿಗೆ’ ಪಥ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 15:33 IST
Last Updated 19 ಮಾರ್ಚ್ 2021, 15:33 IST
ಕಾರವಾರದ ಕಾಳಿಮಾತಾ ನಡುಗಡ್ಡೆಯಲ್ಲಿ ನಿರ್ಮಿಸಲಾಗಿರುವ ಕಾಂಡ್ಲಾ ನಡಿಗೆ ಪಥವನ್ನು ಶಾಸಕಿ ರೂಪಾಲಿ ನಾಯ್ಕ ಶುಕ್ರವಾರ ಉದ್ಘಾಟಿಸಿದರು
ಕಾರವಾರದ ಕಾಳಿಮಾತಾ ನಡುಗಡ್ಡೆಯಲ್ಲಿ ನಿರ್ಮಿಸಲಾಗಿರುವ ಕಾಂಡ್ಲಾ ನಡಿಗೆ ಪಥವನ್ನು ಶಾಸಕಿ ರೂಪಾಲಿ ನಾಯ್ಕ ಶುಕ್ರವಾರ ಉದ್ಘಾಟಿಸಿದರು   

ಕಾರವಾರ: ‘ಗೋವಾ ಗಡಿ ಭಾಗದಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂಡ್ಲಾ ಸಸ್ಯಗಳಿರುವ ಪ್ರದೇಶ ಸೇರಿದಂತೆ ಅನೇಕ ಅರಣ್ಯ ಭಾಗಗಳಲ್ಲಿ ಪ್ರವಾಸಿ ತಾಣಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ನಗರದ ಕೋಡಿಭಾಗದ ಕಾಳಿಮಾತಾ ನಡುಗಡ್ಡೆಯಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ‘ಕಾಂಡ್ಲಾ ನಡಿಗೆ ಪಥ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಇದೇವೇಳೆ, ಅರಣ್ಯದಂಚಿನ ಗ್ರಾಮಸ್ಥರಿಗೆ ಅಡುಗೆ ಅನಿಲ ವಿತರಣೆ ಮತ್ತು ಮೀನುಗಾರರಿಗೆ ಬಲೆ ವಿತರಣೆಗೆ ಚಾಲನೆ ನೀಡಿದರು.

‘ಕಾಳಿ ಮಾತಾ ನಡುಗಡ್ಡೆ ಹಾಗೂ ಕೂರ್ಮಗಡ ಜಾತ್ರೆ ಸಂದರ್ಭದಲ್ಲಿ ಅವಘಡ ತಪ್ಪಿಸಲು ಜಟ್ಟಿಗಳನ್ನು ನಿರ್ಮಿಸಲಾಗುವುದು. ಈ ಸಂಬಂಧ ಈಗಾಗಲೇ ಕೆಲವು ಕಾರ್ಯಗಳು ಪ್ರಾರಂಭವಾಗಿವೆ’ ಎಂದರು.

ADVERTISEMENT

ಕಾರವಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮಾತನಾಡಿ, ‘ಜಿಲ್ಲೆಯಲ್ಲಿ ಕಾಂಡ್ಲಾ ಸಸ್ಯಗಳಿರುವ ಪ್ರದೇಶಗಳಲ್ಲಿ ಕಾಳಿಮಾತಾ ನಡುಗಡ್ಡೆಯೂ ಒಂದಾಗಿದೆ. ಈ ನಡುಗಡ್ಡೆಯಲ್ಲಿ ಕಾಂಡ್ಲಾ ನಡಿಗೆ ಪಥ ನಿರ್ಮಿಸಲು ಒಂದು ವರ್ಷದಿಂದ ನಿರಂತರವಾಗಿ ಶ್ರಮಿಸಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕಾಂಡ್ಲಾ ಅರಣ್ಯವು ಒಟ್ಟು 3,200 ಹೆಕ್ಟರ್ ಪ್ರದೇಶವಿದೆ. ಇಲ್ಲಿ 240 ಮೀಟರ್ ಉದ್ದದ ನಡಿಗೆ ಪಥ ನಿರ್ಮಿಸಲಾಗಿದೆ. ಪರಿಸರ ಪ್ರವಾಸೋದ್ಯಮ ಯೋಜನೆಯಡಿ ಇದರ ನಿರ್ವಹಣೆ ನಡೆಯಲಿದೆ’ ಎಂದರು.

ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ವಿಜ್ಞಾನಿಗಳಿಗೆ ಅಧ್ಯಯನ ಮಾಡಲು ಕಾಳಿಮಾತಾ ನಡುಗಡ್ಡೆ ಉತ್ತಮ ಪ್ರದೇಶ ಹಾಗೂ ಪ್ರವಾಸಿ ತಾಣವಾಗಿದೆ ಎಂದು ಹೇಳಿದರು.

ಕಾಳಿಮಾತಾ ಮಂದಿರದ ಧರ್ಮಾಧಿಕಾರಿ ವಿಷ್ಣು ಸಾವಂತ ಬೋಸ್ಲೆ, ನಗರಸಭೆಯ ಉಪಾಧ್ಯಕ್ಷ ಪ್ರಕಾಶ ಪಿ.ನಾಯ್ಕ, ಕಾರವಾರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶರಣ ಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.