ADVERTISEMENT

ಕಾರವಾರ: ಪ್ರವಾಸಿಗರಿಂದ ದೂರವಾದ ‘ಕಾಂಡ್ಲಾ ನಡಿಗೆ’

ನಿರ್ಲಕ್ಷ್ಯಕ್ಕೆ ಒಳಗಾದ ಕಾಳಿ ನಡುಗಡ್ಡೆಯಲ್ಲಿ ರೋಮಾಂಚನಕಾರಿ ತಾಣ

ಗಣಪತಿ ಹೆಗಡೆ
Published 5 ಅಕ್ಟೋಬರ್ 2024, 5:56 IST
Last Updated 5 ಅಕ್ಟೋಬರ್ 2024, 5:56 IST
ಕಾರವಾರದ ಕಾಳಿ ನಡುಗಡ್ಡೆಯಲ್ಲಿನ ಕಾಂಡ್ಲಾ ನಡಿಗೆ ಪಥದ ಪ್ರವೇಶದ್ವಾರದಲ್ಲಿ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗವು ಪ್ರವೇಶ ನಿಷೇಧಿಸಿ ಸೂಚನಾ ಫಲಕ ಅಳವಡಿಸಿರುವುದು
ಕಾರವಾರದ ಕಾಳಿ ನಡುಗಡ್ಡೆಯಲ್ಲಿನ ಕಾಂಡ್ಲಾ ನಡಿಗೆ ಪಥದ ಪ್ರವೇಶದ್ವಾರದಲ್ಲಿ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗವು ಪ್ರವೇಶ ನಿಷೇಧಿಸಿ ಸೂಚನಾ ಫಲಕ ಅಳವಡಿಸಿರುವುದು   

ಕಾರವಾರ: ಇಲ್ಲಿನ ಕಾಳಿ ನಡುಗಡ್ಡೆಯಲ್ಲಿ ಮೂರುವರೆ ವರ್ಷಗಳ ಹಿಂದೆ ಆರಂಭಿಸಿದ್ದ ‘ಕಾಂಡ್ಲಾ ನಡಿಗೆ’ ಸ್ತಬ್ಧಗೊಂಡು ವರ್ಷಗಳೇ ಕಳೆದಿವೆ. ಪ್ರವಾಸೋದ್ಯಮಕ್ಕೆ ಪೂರಕವಾಗಿದ್ದ ಸೌಲಭ್ಯವು ಪ್ರಚಾರದ ಕೊರತೆ, ನಿರ್ವಹಣೆಗೆ ನಿರ್ಲಕ್ಷ್ಯದ ಕಾರಣಕ್ಕೆ ಸೊರಗಿದೆ ಎಂಬುದು ಸ್ಥಳೀಯರ ಆರೋಪ.

ಕಾಳಿನದಿಯ ಮಧ್ಯೆ ಇರುವ ಕಾಳಿ ದ್ವೀಪದಲ್ಲಿ 2020–21ನೇ ಸಾಲಿನಲ್ಲಿ ಅರಣ್ಯ ಇಲಾಖೆಯು ಸುಮಾರು ₹20 ಲಕ್ಷ ವೆಚ್ಚದಲ್ಲಿ 240 ಮೀಟರ್ ಉದ್ದದ ಕಾಂಡ್ಲಾ ನಡಿಗೆ ಪಥ (ಮ್ಯಾಂಗ್ರೋವ್ ಬೋರ್ಡ್ ವಾಕ್) ನಿರ್ಮಿಸಿತ್ತು. ಆರಂಭದ ಕೆಲ ತಿಂಗಳು ನೂರಾರು ಪ್ರವಾಸಿಗರನ್ನು ಸೆಳೆದಿದ್ದ ಪಥದಲ್ಲಿ ನಂತರದ ದಿನಗಳಲ್ಲಿ ಪ್ರವಾಸಿಗರ ಹೆಜ್ಜೆ ಗುರುತು ಮೂಡಿದ್ದೇ ಅಪರೂಪ!

ನಡುಗಡ್ಡೆಯಲ್ಲಿರುವ ಕಾಳಿಕಾಮಾತಾ ದೇವಾಲಯದ ಸಮೀಪ ನದಿಯ ಅಂಚಿನಲ್ಲಿ ಕಾಂಡ್ಲಾ ನಡಿಗೆಗೆ ಅನುಕೂಲವಾಗುವಂತೆ ಮರದ ಹಲಗೆಗಳನ್ನು ಒಟ್ಟೊಟ್ಟಾಗಿ ಜೋಡಿಸಿ ಸೇತುವೆ ನಿರ್ಮಿಸಲಾಗಿದೆ. ಸಿಮೆಂಟ್ ಕಂಬಗಳನ್ನು ಆಧರಿಸಿ ಇದು ನಿಂತಿದೆ. ಅಲ್ಲಲ್ಲಿ ಮರದ ಹಲಗೆಗಳು ಮುರಿದು ಬಿದ್ದಿದ್ದರೆ, ಮತ್ತೆ ಕೆಲವೆಡೆ ದುರ್ಬಲ ಸ್ಥಿತಿಯಲ್ಲಿವೆ. ಹೀಗಾಗಿ, ‘ನಿರ್ವಹಣೆ ಕಾರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ’ ಎಂಬ ಎಚ್ಚರಿಕೆ ಫಲಕವನ್ನು ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದೆ.

ADVERTISEMENT

‘ಕಾಳಿನದಿಯ ಮಧ್ಯಭಾಗದಲ್ಲಿ ಕಾಂಡ್ಲಾಗಿಡಗಳ ನಡುವೆ ತಂಪನೆಯ ವಾತಾವರಣದಲ್ಲಿ ಮರದ ಹಲಗೆಗಳ ಸೇತುವೆ ಮೇಲೆ ನಡೆಯುತ್ತ ಸಾಗುವುದು ರೋಮಾಂಚನಕಾರಿ ಅನುಭವ ನೀಡುತ್ತದೆ. ಇಂತಹ ಸೌಲಭ್ಯ ಬಳಸಿಕೊಂಡು ಪ್ರವಾಸಿಗರನ್ನು ಸೆಳೆಯುವ ಅಪರೂಪದ ಅವಕಾಶವನ್ನೂ ಕೈಚೆಲ್ಲಲಾಗಿದೆ. ದೂರದ ಊರಿನ ಪ್ರವಾಸಿಗರಿಗೆ ಹಾಗಿರಲಿ, ಕಾರವಾರದ ಜನರಿಗೇ ಕಾಂಡ್ಲಾ ನಡಿಗೆ ಬಗ್ಗೆ ಮಾಹಿತಿ ಇಲ್ಲ’ ಎನ್ನುತ್ತಾರೆ ಕೋಡಿಬಾಗದ ಹರೀಶ ಸಾರಂಗ್.

‘ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಕಾಂಡ್ಲಾ ನಡಿಗೆ ಪಥ ದುಸ್ಥಿತಿಯಲ್ಲಿದೆ. ಅದನ್ನು ಸರಿಯಾಗಿ ನಿರ್ವಹಣೆಯನ್ನೇ ಮಾಡಿಲ್ಲ. ಸುತ್ತಮುತ್ತಲಿನ ರೆಸಾರ್ಟ್, ಹೋಮ್ ಸ್ಟೇಗಳಿಗೆ ಭೇಟಿ ನೀಡುತ್ತಿದ್ದ ಪ್ರವಾಸಿಗರನ್ನು ಇಲ್ಲಿಗೆ ಕರೆತರಲಾಗುತ್ತಿತ್ತು. ಸೌಕರ್ಯ ಹಾಳಾಗಿದ್ದರಿಂದ ಈಗ ಅವರು ಪ್ರವಾಸಿಗರನ್ನು ಕರೆತರುವುದನ್ನೂ ನಿಲ್ಲಿಸಿದ್ದಾರೆ’ ಎನ್ನುತ್ತಾರೆ ನಂದನಗದ್ದಾದ ಕಲ್ಪೇಶ್ ನಾಯ್ಕ.

ರಾಜ್ಯದ ಎರಡನೇ ಅಪರೂಪದ ತಾಣ

ಕಾಂಡ್ಲಾ ವನಗಳ ನಡುವೆ ಮರದ ಹಲಗೆಯ ಕಿರುಸೇತುವೆಗಳ ಮೇಲೆ ನಡೆದು ಸಾಗುವ ಅವಕಾಶವಿರುವ ರಾಜ್ಯದ ಎರಡನೇ ತಾಣ ಕಾಳಿದ್ವೀಪದಲ್ಲಿದೆ. ಇಲ್ಲಿ ಕಾಂಡ್ಲಾ ನಡಿಗೆ ಸೌಲಭ್ಯಕ್ಕೆ ಮುನ್ನ ಜಿಲ್ಲೆಯ ಹೊನ್ನಾವರದಲ್ಲಿ ಇಂಥದ್ದೇ ಸೌಲಭ್ಯ ಕಲ್ಪಿಸಲಾಗಿತ್ತು. ಅಲ್ಲಿ ಈಗಲೂ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ‘ಅರಣ್ಯ ಇಲಾಖೆಯು ಪ್ರತಿ ವ್ಯಕ್ತಿಗೆ ₹50 ಶುಲ್ಕ ನಿಗದಿಪಡಿಸಿ ಕಾಂಡ್ಲ ನಡಿಗೆಗೆ ಅವಕಾಶ ಕಲ್ಪಿಸಿತ್ತು. ಆರಂಭದ ಕೆಲ ದಿನ ಶುಲ್ಕ ಸಂಗ್ರಹ ನಿರ್ವಹಣೆ ನಡೆದವೇ ವಿನಃ ಬಳಿಕ ಇಲ್ಲಿ ಮೇಲ್ವಿಚಾರಣೆಗೂ ಸಿಬ್ಬಂದಿ ಇರುತ್ತಿರಲಿಲ್ಲ’ ಎಂದು ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದ ಪ್ರವಾಸಿಗರೊಬ್ಬರು ಹೇಳಿದರು.

ಕಾಂಡ್ಲಾ ನಡಿಗೆ ಪಥವನ್ನು ಅಲ್ಲಲ್ಲಿ ಸರಿಪಡಿಸುವ ಕೆಲಸ ಶೀಘ್ರವೇ ನಡೆಯಲಿದೆ. ದುರಸ್ತಿ ಕಾರ್ಯದ ನಂತರ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತದೆ.
ಕಿರಣ್, ಅರಣ್ಯ ಇಲಾಖೆ ಕೋಸ್ಟಲ್ ಮರೈನ್ ವಿಭಾಗದ ಆರ್.ಎಫ್.ಒ
ಕಾಂಡ್ಲಾ ನಡಿಗೆ ಪಥದ ಮರದ ಹಲಗೆಗಳು ಮುರಿದು ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.