ಕುಮಟಾ: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯ ಇರುವ ಕಾರಣ ದಿನದಿಂದ ದಿನಕ್ಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಅಗತ್ಯವಿರುವ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಉತ್ತಮ ವೈದ್ಯಕೀಯ ಸೇವೆಗೆ ಅಡ್ಡಿಯಾಗುತ್ತಿದೆ.
100 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದ ಆಸ್ಪತ್ರೆಗೆ ಸ್ಥಳೀಯ ರೋಟರಿ ಸಂಸ್ಥೆ, ಅನೇಕ ದಾನಿಗಳು ಅಗತ್ಯವಿರುವ ಗುಣಮಟ್ಟದ ಆಂಬುಲೆನ್ಸ್, ಐ.ಸಿ.ಯು ಘಟಕ, ಇಸಿಜಿ ಯಂತ್ರ, ಎಕ್ಸರೇ ಯಂತ್ರ, ಡಯಾಲಿಸಿಸ್ ಯಂತ್ರಗಳನ್ನು ನೀಡಿದ್ದಾರೆ. ಇದರಿಂದಾಗಿ ಹೆಚ್ಚಿನ ಎಲ್ಲ ಚಿಕಿತ್ಸೆಗಳ ಪರೀಕ್ಷೆಯನ್ನು ಅಸ್ಪತ್ರೆಯಲ್ಲಿ ಕಡಿಮೆ ವೆಚ್ಚದಲ್ಲಿ ನೀಡಲು ಸಾಧ್ಯವಾಗಿರುವುದು ಬಡ ರೋಗಿಗಳಿಗೆ ವರದಾನವಾಗಿದೆ.
ಮಣಿಪಾಲ, ಮಂಗಳೂರು ಹಾಗೂ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ನಿರಂತರ ಚಿಕಿತ್ಸೆ ಪಡೆಯುವ ಕುಮಟಾ ಮೂಲದ ಎಷ್ಟೋ ಜನರು ಈ ಅಸ್ಪತ್ರೆಗೆ ಬಂದು ದಾಖಲಾಗುತ್ತಿದ್ದಾರೆ ಎಂಬುದಾಗಿ ಇಲ್ಲಿನ ವೈದ್ಯರು ಹೇಳುತ್ತಾರೆ.
‘ಆಸ್ಪತ್ರೆಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ಕಣ್ಣು ಹಾಗೂ ಕಿವಿ, ಮೂಗು, ಗಂಟಲು ವಿಭಾಗಕ್ಕೆ ವೈದ್ಯರಿಲ್ಲ. ಆಸ್ಪತ್ರೆಯ ಮೆಡಿಸಿನ್, ಅನಸ್ತೇಸಿಯಾ, ಶಸ್ತ್ರ ಚಿಕಿತ್ಸೆ ಹಾಗೂ ಸ್ತ್ರೀರೋಗ ವಿಭಾಗಕ್ಕೆ ಕಾರವಾರ ವೈದ್ಯಕೀಯ ಕಾಲೇಜಿನಿಂದ ಸ್ನಾತಕೋತ್ತರ ವೈದ್ಯರನ್ನು ಪೂರೈಸಬೇಕಿದೆ. ಎಕ್ಸರೇ ವಿಭಾಗಕ್ಕೆ 1, ಔಷಧ ವಿತರಣೆಗೆ 2, ಪ್ರಯೋಗಾಲಯ ತಂತ್ರಜ್ಞ 1, ನರ್ಸಿಂಗ್ ಸೂಪರಿಂಟೆಂಡೆಂಟ್ 1, ಸ್ಟಾಫ್ ನರ್ಸ್ 2, ಐಸಿಯು ಸ್ಟಾಫ್ ನರ್ಸ್ 2 ಹಾಗೂ ನೇತ್ರಾಧಿಕಾರಿ 1 ಹುದ್ದೆಗಳು ಖಾಲಿ ಇವೆ. ಇರುವ ಸಿಬ್ಬಂದಿ ಒತ್ತಡ ಅನುಭವಿಸಬೇಕಾಗುತ್ತಿದೆ’ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ ಹೇಳುತ್ತಾರೆ.
‘ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 12 ಸಾವಿರ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ತುರ್ತು ನಿಗಾ ಘಟಕಕ್ಕೆ 70 ಜನರು ದಾಖಲಾಗುತ್ತಿದ್ದಾರೆ. ಪ್ರತಿ ತಿಂಗಳು ಸುಮಾರು 1 ಸಾವಿರ ತುರ್ತು ಚಿಕಿತ್ಸಾ ಪ್ರಕರಣಗಳು ದಾಖಲಾಗುತ್ತವೆ. ಸುಮಾರು 50 ಹೆರಿಗೆ, 50 ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ’ ಎಂದರು.
‘ಸ್ಥಳೀಯ ಶಾಸಕರ ಪ್ರಯತ್ನದಿಂದ ಆಸ್ಪತ್ರೆ ಆವರಣದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣಕ್ಕೆ ಬಿ.ಇ.ಎಲ್ ಕಂಪನಿ ತನ್ನ ಸಿ.ಎಸ್.ಆರ್ ನಿಧಿಯಿಂದ ₹ 2.75 ಕೋಟಿ ನೆರವು ನೀಡಿದ್ದು, ಇದು ಜಿಲ್ಲೆಯ ಏಕೈಕ ಟ್ರಾಮಾ ಸೆಂಟರ್ ಆಗಿದೆ. ಇನ್ನು ಎರಡು ತಿಂಗಳಲ್ಲಿ ಟ್ರಾಮಾ ಸೆಂಟರ್ ಕಾರ್ಯಾರಂಭ ಮಾಡಲು ವೈದ್ಯರು, ತಂತ್ರಜ್ಞರನ್ನೊಳಗೊಂಡ ಸಿಬ್ಬಂದಿ ಅಗತ್ಯವಿದೆ’ ಎಂದರು.
ಸ್ಥಳೀಯವಾಗಿ ಲಭ್ಯವಿರುವ ಉತ್ತಮ ಫಿಸಿಶಿಯನ್ ಸೇವೆ ಆಸ್ಪತ್ರೆಗೆ ಬಳಸಿಕೊಳ್ಳಲು, ಅಗತ್ಯ ಸಿಬ್ಬಂದಿ ನೇಮಕಾತಿ ಬಗ್ಗೆ ಆರೋಗ್ಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ.ದಿನಕರ ಶೆಟ್ಟಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.