ಶಿರಸಿ: ನಾಡಿನೆಲ್ಲೆಡೆಯ ಭಕ್ತರ ಸಂಗಮದಲ್ಲಿ ಜೈಕಾರ, ಜಯಘೋಷಗಳೊಂದಿಗೆ ನಾಡದೇವಿ ಮಾರಿಕಾಂಬೆಯ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.
ಸೂರ್ಯರಶ್ಮಿ ಭುವಿಯನ್ನು ಸ್ಪರ್ಶಿಸುವ ಮುನ್ನವೇ ದೇವಾಲಯದ ಎದುರು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಜನರು, ಸರ್ವಾಭರಣಭೂಷಿತೆಯಾದ ದೇವಿ ಭಕ್ತರ ಹೆಗಲಮೇಲೇರಿ ರಥದೆಡೆಗೆ ಮುಖ ಮಾಡುತ್ತಿದ್ದಂತೆ, ಜೋರಾಗಿ ಚಪ್ಪಾಳೆ ತಟ್ಟಿ, ಕೂಗಿದ ಜೈಕಾರ ಮುಗಿಲು ಮುಟ್ಟಿತು.
ದೇವಿಯ ಶೋಭಾಯಾತ್ರೆಯುದ್ದಕ್ಕೂ ಮೊಳಗಿದ ಡೊಳ್ಳು, ತಮಟೆ, ಕಹಳೆಯ ನಿನಾದ, ಲಂಬಾಣಿ ಮಹಿಳೆಯರ ಸೋಬಾನೆ ಪದ, ಆಸಾದಿಯರ ಹಾಡು, ಬೇಡ ಜೋಗತಿಯರ ಚವರಿ ಸೇವೆ, ರಥೋತ್ಸವದ ಸಂಭ್ರಮವನ್ನು ಇಮ್ಮಡಿಸಿತು. ರಥದ ಎದುರು ‘ಅಮ್ಮ’ನನ್ನು ಆವ್ಹಾನಿಸಿಕೊಂಡಿದ್ದ ಭಕ್ತರು ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದರು. ಮುಖಕ್ಕೆ ಕುಂಕುಮ ಬಳಿದು, ತಲೆಗೂದಲನ್ನು ಇಳಿಬಿಟ್ಟು ಕುಣಿದ ಅವರು, ತಾಯಿಯೆದುರು ಕಷ್ಟಗಳನ್ನೆಲ್ಲ ಅರುಹಿಕೊಂಡು ನಿರುಮ್ಮಳರಾದರು.
ರಸ್ತೆ ಅಂಚಿನಲ್ಲಿ, ಅಂಗಡಿ ಮುಂಗಟ್ಟುಗಳಲ್ಲಿ, ಮನೆಯ ಮಹಡಿಯಲ್ಲಿ ನಿಂತು ದೇವಿ ರಥದಲ್ಲಿ ಸಾಗುವುದನ್ನು ಕಣ್ತುಂಬಿಕೊಂಡ ಹಲವರು, ಬಾಳೆಹಣ್ಣು, ನಾಣ್ಯ, ಉತ್ತುತ್ತಿ, ಕೋಳಿಗಳನ್ನ ರಥದೆಡೆಗೆ ಎಸೆದು ಹರಕೆ ಒಪ್ಪಿಸಿದರು.
ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾವೇರಿ, ಧಾರವಾಡ ಜಿಲ್ಲೆಗಳ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಭಕ್ತರು ಬಹುಸಂಖ್ಯೆಯಲ್ಲಿ ಸೇರಿದ್ದರು.
ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ವಿರಾಜಮಾನಳಾಗಿರುವ ದೇವಿಗೆ, ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಸೇವೆಗಳು ಪ್ರಾರಂಭವಾಗಲಿವೆ. ಮಾರ್ಚ್11ರಂದು ಜಾತ್ರೆ ಸಂಪನ್ನಗೊಳ್ಳುತ್ತದೆ.
ಕಲ್ಯಾಣೋತ್ಸವ:ದೇವಿಯ ಕಲ್ಯಾಣ ಮಹೋತ್ಸವ ಮಂಗಳವಾರ ರಾತ್ರಿ ಸಭಾ ಮಂಟಪದಲ್ಲಿ ಭಕ್ತಿ–ಭಾವದಿಂದ ಜರುಗಿತು. ಹೊಸ ಸೀರೆಯುಟ್ಟ, ಮೈತುಂಬ ಆಭರಣಗಳನ್ನು ಧರಿಸಿದ್ದ ಮಾರಿಕಾಂಬೆ, ಆಕೆಯ ಸಹೋದರಿಯರಾದ ಮರ್ಕಿ–ದುರ್ಗಿಯರ ವಿವಾಹಕ್ಕೆ ಸಹಸ್ರಾರು ಜನರು ಸಾಕ್ಷಿಯಾದರು.
ನವವಧುವಿಗೆ ದೃಷ್ಟಿ ತಾಗಬಾರದೆಂದು ಗುಡಿಗಾರರು ದೃಷ್ಟಿಬೊಟ್ಟು ಇಟ್ಟರು. ದೇವಿಯ ತವರುಮನೆಯಾದ ನಾಡಿಗಗಲ್ಲಿಯ ನಾಡಿಗರ ಮನೆತನದವರು ಸಾರ್ವಜನಿಕರೊಡಗೂಡಿ ಮೆರವಣಿಗೆಯಲ್ಲಿ ಬಂದು ದೇವಿಗೆ ಮಾಂಗಲ್ಯ ಧಾರಣೆ ಮಾಡಿದರು. ನಾಡಿಗರ ಮನೆಯಲ್ಲಿ ಕಲ್ಯಾಣ ಮಹೋತ್ಸವದ ಅಂಗವಾಗಿ ಸಿಹಿ ಭೋಜನ ಏರ್ಪಡಿಸಲಾಗಿತ್ತು. ಕಲ್ಯಾಣಿಯಾದ ಮಾರಿಕಾಂಬೆಗೆ ನಾಡಿಗರು ಮೊದಲ ಮಂಗಳಾರತಿ ಬೆಳಗಿದರು. ನಂತರ ದೇವಾಲಯದ ಬಾಬುದಾರ ಕುಟುಂಬದವರು ಅಹೋರಾತ್ರಿ ದೇವಿಗೆ ಆರತಿ ಎತ್ತಿ, ಪೂಜೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.