ಕಾರವಾರ: ‘ನಗರದ ಮಾದರಿಯಲ್ಲೇ ಹೊರ ವಲಯಗಳಲ್ಲಿ ಮಾರುಕಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಬಿಣಗಾದಲ್ಲಿ ಆರೇಳು ತಿಂಗಳಲ್ಲಿ ನಿರ್ಮಾಣವಾಗಲಿದೆ. ಇದರಿಂದ ಕಾರವಾರದ ಕೇಂದ್ರ ಪ್ರದೇಶದಲ್ಲಿ ಅನಗತ್ಯ ಜನಸಂದಣಿ ನಿಯಂತ್ರಣಕ್ಕೆ ಬರಲಿದೆ’ ಎಂದು ಶಾಸಕಿ ರೂಪಾಲಿ ನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಉದ್ಯಾನಗಳು, ಸುಂಕೇರಿಯಲ್ಲಿ ಶಾಲಾ ಕೊಠಡಿ, ನಗರಸಭೆ ಕಚೇರಿ ಆವರಣದಲ್ಲಿ ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ರಾತ್ರಿ ವಿಶ್ರಾಂತಿ ಕೊಠಡಿ, ಈಜುಕೊಳ ಬಳಿ ಹೂ ಹಣ್ಣು ಮಾರುಕಟ್ಟೆ, ಜಿಲ್ಲಾಧಿಕಾರಿ ಕಚೇರಿ ಬಳಿ ‘ಐ ಲವ್ ಕಾರವಾರ’ ಸೆಲ್ಫಿ ಪಾಯಿಂಟ್‌ಗಳನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಗರದಲ್ಲಿ ಮೂಲ ಸೌಕರ್ಯಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರಸಭೆ ಆವರಣದಲ್ಲಿ ಉದ್ಘಾಟಿಸಲಾಗಿರುವ ವ್ಯವಸ್ಥಿತ ಕೊಠಡಿಗಳು ಮತ್ಯಾವ ನಗರದಲ್ಲೂ ಇಲ್ಲ. ಪೌರ ಕಾರ್ಮಿಕರು ದಿನವಿಡೀ ಶ್ರಮಿಸುತ್ತಾರೆ. ಬಿಸಿಲು, ಮಳೆ ಎನ್ನದೇ ನಗರದ ಸ್ವಚ್ಛತೆಯಲ್ಲಿ ತೊಡಗುತ್ತಾರೆ. ಅವರಿಗೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಸುಸಜ್ಜಿತ ಕೊಠಡಿ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.
‘ನಗರದ ಬೀದಿಗಳ ಬದಿಯಲ್ಲಿ ಕೊಡೆಗಳ ನೆರಳಿನಲ್ಲಿ ಕುಳಿತು ವರ್ತಕರು ಹೂವು, ಹಣ್ಣು ವ್ಯಾಪಾರ ಮಾಡುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ನಗರಸಭೆ ಈಜುಕೊಳದ ಬಳಿ ₹ 30 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗಿದೆ. ಆ ಜಮೀನಿಗೆ ಈಗ ಮಾರುಕಟ್ಟೆಯಲ್ಲಿ ₹ 6 ಕೋಟಿಗೂ ಅಧಿಕ ಬೆಲೆಯಿದೆ. ಅಲ್ಲಿ ಮಾರುಕಟ್ಟೆ ನಿರ್ಮಿಸಲು ಮುಂದಾದಾಗ ಈ ಹಿಂದಿನ ಕೆಲವು ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಾಗಿ ಬಹಳ ಆಕ್ಷೇಪ ಬಂತು. ಆದರೆ, 80 ಜನ ವರ್ತಕರಿಗೆ ಒಂದೇ ಸೂರಿನಲ್ಲಿ ಅವಕಾಶ ನೀಡಿ, ಸೌಕರ್ಯ ಒದಗಿಸಲಾಗಿದೆ’ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ‘ನಗರದ ಅಭಿವೃದ್ಧಿಗೆ ಆಸ್ತಿಗಳ ಮಾಲೀಕರು ತೆರಿಗೆ ಪಾವತಿಸುವುದು ಮುಖ್ಯ. ಹಾಗಾಗಿ ಯಾರೂ ಉಳಿಕೆ ಮಾಡಬೇಡಿ’ ಎಂದು ಮನವಿ ಮಾಡಿದರು.
ವಾಹನ ನಿಲುಗಡೆಗೆ ಕ್ರಮ:‘ನಗರದಲ್ಲಿ ಅಡ್ಡಾದಿಡ್ಡಿಯಾಗಿ, ಅಶಿಸ್ತಿನಿಂದ ವಾಹನಗಳ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಆಗುತ್ತಿರುವ ಅಪಘಾತಗಳು, ಅವಘಡಗಳನ್ನು ತಪ್ಪಿಸಬೇಕಿದೆ. ವಾಹನ ದಟ್ಟಣೆ ನಿಯಂತ್ರಣಕ್ಕೆ ಕರಡು ನಕ್ಷೆ ಸಿದ್ಧವಾಗಿದೆ. ಸಾರ್ವಜನಿಕರು ಅದಕ್ಕೆ ಸಹಕರಿಸಬೇಕು’ ಎಂದು ಶಾಸಕಿ ರೂಪಾಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.