ADVERTISEMENT

ಗೋಕರ್ಣದಲ್ಲಿ ಗಮನಸೆಳೆವ ‘ದಾದುಮ್ಮನ ಮದುವೆ’

ಮಳೆ, ಬೆಳೆಗಾಗಿ ಪ್ರಾರ್ಥಿಸಿ ಹಾಲಕ್ಕಿಗಳ ವಿಶಿಷ್ಟ ಸಂಪ್ರದಾಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:55 IST
Last Updated 4 ಆಗಸ್ಟ್ 2024, 16:55 IST
ಗೋಕರ್ಣದಲ್ಲಿ ನಡೆದ ಹಾಲಕ್ಕಿ ಜನಾಂಗದ ಬಹು ಅಪರೂಪದ ದಾದುಮ್ಮನ ಮದುವೆಯಲ್ಲಿ ವರ-ವಧುಗಳಾದ ಮಹಿಳೆಯರು
ಗೋಕರ್ಣದಲ್ಲಿ ನಡೆದ ಹಾಲಕ್ಕಿ ಜನಾಂಗದ ಬಹು ಅಪರೂಪದ ದಾದುಮ್ಮನ ಮದುವೆಯಲ್ಲಿ ವರ-ವಧುಗಳಾದ ಮಹಿಳೆಯರು    

ಗೋಕರ್ಣ: ಮಳೆ, ಬೆಳೆ ಉತ್ತಮವಾಗಿ ಆಗಲೆಂದು ಪ್ರಾರ್ಥಿಸಿ ಗೋಕರ್ಣದಲ್ಲಿ ಹಾಲಕ್ಕಿ ಒಕ್ಕಲಿಗರು ಸಮುದಾಯದವರು ಭಾನುವಾರ ಆಚರಿಸಿದ ‘ದಾದುಮ್ಮನ ಮದುವೆ’ ಗಮನ ಸೆಳೆಯಿತು.

ಆಷಾಢ ಅಮಾವಸ್ಯೆಯ ದಿನ ಗೋಧೂಳಿ ಮುಹೂರ್ತದಲ್ಲಿ ಗ್ರಾಮದ ಲಕ್ಷ್ಮೀ ಗೌಡ ಅವರು ದೇವಕಿ ಗೌಡರಿಗೆ ಮಾಲೆ ಹಾಕಿ ಮದುವೆಯಾಗುವುದರೊಂದಿಗೆ ಪರಂಪರೆಯನ್ನು ಆಚರಿಸಿದರು. 300ಕ್ಕೂ ಹೆಚ್ಚು ಮಹಿಳೆಯರು ಈ ಮದುವೆಗೆ ಸಾಕ್ಷಿಯಾದರು.

ಮಳೆಗಾಗಿ ಇಂದ್ರನನ್ನು ಪ್ರಾರ್ಥಿಸುವ, ಮಹಿಳೆ–ಮಹಿಳೆಯರ ನಡುವೆ ನಡೆಯುವ ಮದುವೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಕೆಲ ದಶಕಗಳ ಹಿಂದಿನವರೆಗೂ ಗೋಕರ್ಣ ಸುತ್ತಲಿನ ಅನೇಕ ಕಡೆ ಹಾಲಕ್ಕಿ ಒಕ್ಕಲಿಗರು ಮದುವೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಇಂದು ಹುಳಸೇಕೇರಿ ಹಾಲಕ್ಕಿ ಒಕ್ಕಲಿಗರ ಕೇರಿಯಲ್ಲಿ ಮಾತ್ರ ಈ ಮದುವೆ ಕಾಣ ಸಿಗುತ್ತದೆ.

ADVERTISEMENT

ಈ ಮದುವೆಯಲ್ಲಿ ವರ ಮತ್ತು ವಧು ಇಬ್ಬರೂ ಮಹಿಳೆಯರೇ ಆಗಿರುತ್ತಾರೆ. ಇದೇ ಈ ವಿವಾಹದ ವೈಶಿಷ್ಟ್ಯ. ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಆಷಾಢ ಬಹುಳ ಏಕಾದಶಿಯಂದು ನಡೆದು ಯಾರು ವಧು, ಯಾರು ವರ ಎಂಬ ತೀರ್ಮಾನವನ್ನು ಮಹಿಳೆಯರೇ ನಿಶ್ಚಯಿಸುತ್ತಾರೆ. ಈ ವಿವಾಹ ವಿಧಾನದಲ್ಲಿ ಪುರುಷರ ಪಾತ್ರ ನಗಣ್ಯ.

‘ಆಷಾಢ ಅಮಾವಸ್ಯೆಯ ಗೋಧೂಳಿ ಮುಹೂರ್ತದಲ್ಲಿ ಈ ವಿವಾಹ ತಾರಮಕ್ಕಿಯ ಕೇದಿಗೆ ಗಣಪತಿ ಮತ್ತು ಕರಿದೇವರ ಸನ್ನಿಧಿಯಲ್ಲಿ ನಡೆಯುತ್ತದೆ. ಈ ವೇಳೆ ಎರಡೂ ಬದಿಯವರು ತಮ್ಮ ಹೊಣೆಗಾರಿಕೆಯನ್ನು ಜನಪದ ಹಾಡಿನ ಮೂಲಕ ಪ್ರದರ್ಶಿಸುತ್ತಾರೆ. ಹೆಣ್ಣು–ಗಂಡು ಒಪ್ಪಿತವಾದ ಮೇಲೆ ದೇವರ ಎದುರು ಇಬ್ಬರಿಗೂ ಮಾಲೆ ಹಾಕಿಸಿ ಮದುವೆ ಮಾಡಲಾಗುತ್ತದೆ. ವಿವಾಹ ವಿಧಿಯಲ್ಲಿಯ ಮಂತ್ರ ತಂತ್ರಗಳ ಬದಲಾಗಿ ಜಾನಪದ ಹಾಡುಗಳನ್ನು ಹಾಡಲಾಗುತ್ತದೆ’ ಎಂದು ಹಾಲಕ್ಕಿ ಒಕ್ಕಲಿಗ ಸಮುದಾಯದ ಪ್ರಮುಖ ಆನಂದು ಗೌಡ ಹೇಳಿದರು.

‘ಮದು ಮಕ್ಕಳನ್ನು ಹುಳಸೇಕೇರಿ ಗೌಡರ ಮನೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ, ಮುಖ್ಯ ಗೌಡರ ಸಮ್ಮುಖದಲ್ಲಿ ಧಾರೆ ಶಾಸ್ತ್ರ ನಡೆಸಿ, ಉಡುಗೂರೆ ಕೊಡಲಾಗುತ್ತದೆ. ಸಿಹಿ ಹಂಚಿಕೆ ಮತ್ತು ಪಾನೀಯ ವಿತರಣೆಯೊಂದಿಗೆ ಮದುವೆ ಸಂಪನ್ನವಾಗುತ್ತದೆ’ ಎಂದರು.

‘ಪ್ರತಿ ವರ್ಷ ಮಳೆ ದೇವರು ಇಂದ್ರನ ಕೃಪೆಗೆ ಒಳಗಾಗಲು ಈ ಮದುವೆಯನ್ನು ಕೈಗೊಳ್ಳುತ್ತ ಬಂದಿದ್ದೇವೆ. ಒಳ್ಳೆಯ ಬೆಳೆಯಾಗಲಿ ಎಂಬ ಆಶಯ ಇದರ ಹಿಂದಿದೆ’ ಎನ್ನುವುದು ಹಾಲಕ್ಕಿ ಒಕ್ಕಲಿಗರ ಅಭಿಪ್ರಾಯವಾಗಿದೆ.

ಗೋಕರ್ಣದಲ್ಲಿ ನಡೆದ ಹಾಲಕ್ಕಿ ಜನಾಂಗದ ಬಹು ಅಪರೂಪದ ದಾದುಮ್ಮನ ಮದುವೆಯಲ್ಲಿ ವರ-ವಧುಗಳಾದ ಮಹಿಳೆಯರನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಬರುತ್ತಿರುವುದು
ಪೂರ್ವಿಕರು ದೇವೇಂದ್ರನಿಗೆ ದಾದುಮ್ಮ ಎಂದು ಕರೆಯುತ್ತಿದ್ದರು. ದೇವೇಂದ್ರನ ಕೃಪೆಗೆ ಪಾತ್ರರಾಗಲು ನಡೆಸುವ ಈ ಮದುವೆಗೆ ದಾದುಮ್ಮನ ಮದುವೆ ಎಂಬ ಹೆಸರು ಬಂದಿದೆ
ಆನಂದು ಗೌಡ ಹಾಲಕ್ಕಿ ಸಮುದಾಯದ ಪ್ರಮುಖ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.