ಭಟ್ಕಳ: ತಾಲ್ಲೂಕಿನ ಮುರುಡೇಶ್ವರದಲ್ಲಿ ಮೂರು ದಿನಗಳ ಕಾಲ ನಡೆದ ಅದ್ದೂರಿ ಮತ್ಸ್ಯ ಮೇಳಕ್ಕೆ ಶನಿವಾರ ತೆರೆಬಿದಿದ್ದೆ.
ಗುರುವಾರ ಹಾಗೂ ಶುಕ್ರವಾರ ಜನರು ಸಾಗರೋಪಾದಿಯಲ್ಲಿ ಆಗಮಿಸಿ ಮೇಳ ಹಾಗೂ ಅಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿದರು.
ಭಟ್ಕಳ ತಾಲ್ಲೂಕು ಮಾತ್ರವಲ್ಲದೇ ನೆರೆಯ ಕುಂದಾಪುರ, ಬೈಂದೂರು, ಹೊನ್ನಾವರ, ಕುಮಟಾ ತಾಲ್ಲೂಕುಗಳಿಂದ ಲಕ್ಷಕ್ಕೂ ಅಧಿಕ ಜನ ಆಗಮಿಸಿ ಮೇಳದ ಮೆರಗು ಹೆಚ್ಚಿಸಿದರು.
ಗುರುವಾರ ರಾತ್ರಿ ನಡೆದ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರ ಸಂಗೀತ ರಸಸಂಜೆ, ಶುಕ್ರವಾರ ನಡೆದ ಝೇಂಕಾರ ಮೆಲೋಡಿಸ್ ಅವರ ರಸಸಂಜೆ ಹಾಗೂ ಶನಿವಾರ ಚಿತ್ರನಟ ಡಾಲಿ ಧನಂಜಯ ಆಗಮನ ಪ್ರೇಕ್ಷರನ್ನು ರಂಜಿಸಿತು.
ತಾಲ್ಲೂಕಿನಲ್ಲಿ ಕಳೆದ ಹತ್ತಾರು ವರ್ಷಗಳಿಂದ ದೊಡ್ಡಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯದ ಕಾರಣ ಜನರು ದೂರದ ಹೊನ್ನಾವರ, ಕುಮಟಾ ಉತ್ಸವಗಳಿಗೆ ತೆರಳಿ ಕಾರ್ಯಕ್ರಮ ವೀಕ್ಷಿಸಿ ಬರುತ್ತಿದ್ದರು.
ಕಳೆದ ದೀಪಾವಳಿಯಂದು ನಡೆದ ಅದ್ದೂರಿ ಬೈಂದೂರು ಉತ್ಸವವನ್ನು ತಾಲ್ಲೂಕಿನ ಸಾವಿರಾರು ಜನರು ವೀಕ್ಷಿಸಿ ನಿಬ್ಬೆರಗಾಗಿ, ಇಂತಹ ಕಾರ್ಯಕ್ರಮ ಭಟ್ಕಳದಲ್ಲಿ ನಡೆಸದ ಬಗ್ಗೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ್ದರು. ಮುರುಡೇಶ್ವರದಲ್ಲಿ ಬೈಂದೂರು ಉತ್ಸವಕ್ಕಿಂತ ಅದ್ದೂರಿಯಾದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಯಿತು.
ವಿರೋಧಿಗಳ ಟೀಕೆಯ ನಡುವೆಯೂ ಸಚಿವ ಮಂಕಾಳ ವೈದ್ಯ ಮೀನುಗಾರಿಕೆ ದಿನಾಚರಣೆಯನ್ನು ಭಟ್ಕಳದಲ್ಲಿ ಅದ್ದೂರಿಯಾಗಿ ಆಚರಿಸಿ, ಮೀನುಗಾರರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಭಟ್ಕಳದ ಜನತೆಗೆ ಕಲೆ, ಖಾದ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿರುಚಿ ಉಣಬಡಿಸಿರುವುದು ಪ್ರಶಂಸನೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.