ADVERTISEMENT

ಶಿರೂರು ಗುಡ್ಡ: ನದಿಯಲ್ಲಿ ಲಾರಿ ಸಿಲುಕಿರುವ ಶಂಕೆ

ಎರಡು ಸ್ಥಳಗಳಲ್ಲಿ ಲೋಹದ ವಸ್ತುಗಳನ್ನು ಪತ್ತೆ ಹಚ್ಚಿದ ರೇಡಾರ್

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 18:50 IST
Last Updated 24 ಜುಲೈ 2024, 18:50 IST
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಗಂಗಾವಳಿ ನದಿಗೆ ಬಿದ್ದಿರುವ ಮಣ್ಣಿನ ರಾಶಿ ತೆರವುಗೊಳಿಸಲು ಪೊಕ್ಲೇನ್ ಮೂಲಕ ಬುಧವಾರ ಕಾರ್ಯಾಚರಣೆ ನಡೆಯಿತು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಗಂಗಾವಳಿ ನದಿಗೆ ಬಿದ್ದಿರುವ ಮಣ್ಣಿನ ರಾಶಿ ತೆರವುಗೊಳಿಸಲು ಪೊಕ್ಲೇನ್ ಮೂಲಕ ಬುಧವಾರ ಕಾರ್ಯಾಚರಣೆ ನಡೆಯಿತು   

ಕಾರವಾರ: ಶಿರೂರಿನ ಗುಡ್ಡ ಕುಸಿತ ದುರಂತದಲ್ಲಿ ಕಾಣೆಯಾದ ಲಾರಿ ಪತ್ತೆಗಾಗಿ ಬುಧವಾರ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿದಾಗ ಲೋಹದ ವಸ್ತುಗಳು ಇರುವುದು ರೇಡಾರ್ ಮೂಲಕ ಪತ್ತೆಯಾಗಿದೆ. 

‘ಗುಡ್ಡ ಕುಸಿತದಿಂದ ವ್ಯಾಪಕ ಪ್ರಮಾಣದಲ್ಲಿ ಮಣ್ಣಿನ ರಾಶಿ ನದಿಗೆ ಬಿದ್ದಿರುವ ಸ್ಥಳದಲ್ಲಿ ಎರಡು ಕಡೆ ಲೋಹದ ವಸ್ತುಗಳು ಇರುವುದನ್ನು ರೇಡಾರ್‌ನಿಂದ ಗುರುತಿಸಲಾಗಿದೆ. ಇದೇ ಸ್ಥಳದಲ್ಲಿ ಮಣ್ಣು ತೆರವುಗೊಳಿಸಲು ಪೊಕ್ಲೇನ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರೇಡಾರ್ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಲೋಹದ ವಸ್ತುಗಳನ್ನು ಪತ್ತೆ ಮಾಡಿದೆ. ಇದರಲ್ಲಿ ಒಂದು ಕೇರಳದ ನಾಟಾ ತುಂಬಿದ್ದ ಲಾರಿ ಮತ್ತು ಇನ್ನೊಂದು ನದಿಗೆ ಬಿದ್ದಿದ್ದ ಗ್ಯಾಸ್ ಟ್ಯಾಂಕರ್‌ನ ಟ್ರಕ್‍ ಎಂಬ ಶಂಕೆ ಇದೆ. ಅವುಗಳನ್ನು ಪತ್ತೆ ಮಾಡಲು ಗುರುವಾರ ಕಾರ್ಯಾಚರಣೆ ನಡೆಯಲಿದೆ. ನೊಯ್ಡಾದಿಂದ ಡ್ರೋನ್ ತಂತ್ರಜ್ಞಾನ ಆಧಾರಿತ ಶೋಧನ ಯಂತ್ರವನ್ನು ತರಿಸಲಾಗುತ್ತಿದೆ. ಅದು 30 ಮೀ. ಆಳದವರೆಗಿನ ವಸ್ತುಗಳನ್ನು ಶೋಧಿಸಲಿದೆ’ ಎಂದು ಹೇಳಿದ್ದಾರೆ.

ADVERTISEMENT

ದುರ್ಘಟನೆಯಲ್ಲಿ ಕಣ್ಮರೆಯಾದ ಮೂವರಿಗಾಗಿ ಮುಳುಗು ತಜ್ಞರು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದು, ತಟರಕ್ಷಕ ಪಡೆಯ ಹೆಲಿಕಾಪ್ಟರ್ ಮೂಲಕವೂ ಸಮುದ್ರ ಭಾಗದಲ್ಲಿ ಶೋಧ ಕಾರ್ಯ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.