ADVERTISEMENT

ಉತ್ತರ ಕನ್ನಡ | ಅನಧಿಕೃತ ಹೋಮ್ ಸ್ಟೇಗಳ ವಿರುದ್ಧ ಕ್ರಮ ಕೈಗೊಳ್ಳಿ: ಮಂಕಾಳ ವೈದ್ಯ

ಪ್ರವಾಸೋದ್ಯಮ ಸಮಿತಿ ಸಭೆಯಲ್ಲಿ ಸಚಿವ ಮಂಕಾಳ ವೈದ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 14:23 IST
Last Updated 19 ಅಕ್ಟೋಬರ್ 2024, 14:23 IST
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಉಪವಿಭಾಗಾಧಿಕಾರಿ ಕನಿಷ್ಕ ಭಾಗವಹಿಸಿದ್ದರು
ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಉಪವಿಭಾಗಾಧಿಕಾರಿ ಕನಿಷ್ಕ ಭಾಗವಹಿಸಿದ್ದರು   

ಕಾರವಾರ: ‘ಜಿಲ್ಲೆಯ ಎಲ್ಲ ಹೋಮ್ ಸ್ಟೇಗಳ ಪರಿಶೀಲನೆ ನಡೆಸಿ, ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿರುವ ಬಗ್ಗೆ ವರದಿ ಸಲ್ಲಿಸಬೇಕು. ಅನಧಿಕೃತವಾಗಿರುವ ಹೋಮ್ ಸ್ಟೇಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಅನಧಿಕೃತ ಹೋಮ್ ಸ್ಟೇಗಳ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಜಿಲ್ಲೆಯ ಕಡಲತೀರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ, ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜೀವರಕ್ಷಕ ಸಿಬ್ಬಂದಿಗೆ ಲೈಫ್ ಜಾಕೆಟ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಮಗ್ರಿ ಪೂರೈಕೆಗೆ ತುರ್ತು ಕ್ರಮವಹಿಸಬೇಕು. ಜೀವರಕ್ಷಕ ಸಿಬ್ಬಂದಿಯ ಜತೆಗೆ ಪೊಲೀಸ್ ಸಿಬ್ಬಂದಿಯನ್ನೂ ನಿಯೋಜಿಸಬೇಕು’ ಎಂದು ಹೇಳಿದರು.

ADVERTISEMENT

‘ಪ್ರತಿ ಕಡಲತೀರಗಳಿಗೆ ಅಗತ್ಯವಿರುವಷ್ಟು ಸಂಖ್ಯೆಯ ಜೀವ ರಕ್ಷಕರನ್ನು ಹಾಗೂ ಮೇಲ್ವಿಚಾರಕರನ್ನು ನೇಮಕ ಮಾಡಬೇಕು. ಪ್ರತಿ ಜೀವ ರಕ್ಷಕರಿಗೆ, ಅವರು ಕಾರ್ಯನಿರ್ವಹಿಸಬೇಕಾದ ನಿರ್ದಿಷ್ಟ ಸ್ಥಳವನ್ನು ಹಂಚಿಕೆ ಮಾಡಿ ಆ ಪ್ರದೇಶದಲ್ಲಿ ಪ್ರವಾಸಿಗರಿಗೆ ಯಾವುದೇ ಅಪಾಯವಾಗದಂತೆ ನಿರಂತರವಾಗಿ ನಿಗಾ ವಹಿಸುವಂತೆ ಸೂಚನೆ ನೀಡಬೇಕು’ ಎಂದರು.

‘ಹೊನ್ನಾವರದ ಶರಾವತಿ ನದಿಯಲ್ಲಿ ಬೋಟಿಂಗ್ ಚಟುವಟಿಕೆಗಳ ಬಗ್ಗೆ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸಬೇಕು. ಜಿಲ್ಲೆಯಲ್ಲಿ ಹೊಸ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಅನುಮತಿ ನೀಡುವ ಮುನ್ನ ಕಡ್ಡಾಯವಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆ ಸಭೆಯಲ್ಲಿ ಪರಿಶೀಲಿಸಿ ಅನುಮತಿ ನೀಡಬೇಕು’ ಎಂದರು.

‘ಮುರುಡೇಶ್ವರದಲ್ಲಿ ₹360 ಕೋಟಿ ವೆಚ್ಚದಲ್ಲಿ ಬಂದರು ನಿರ್ಮಾಣ ಮಾಡಲಾಗುವುದು. ಇದರಿಂದ ಕ್ರೂಸ್‌ಗಳ ಮೂಲಕ ಪ್ರವಾಸಿಗರು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಆಗಮಿಸಲು ಸಾಧ್ಯವಾಗಲಿದೆ’ ಎಂದರು.

ಶಾಸಕರಾದ ಸತೀಶ ಸೈಲ್, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್, ಡಿಸಿಎಫ್ ರವಿಶಂಕರ, ಉಪ ವಿಭಾಗಾಧಿಕಾರಿಗಳಾದ ಕನಿಷ್ಕ, ಕಾವ್ಯಾರಾಣಿ, ಡಾ.ನಯನಾ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ವಿ. ಜಯಂತ್ ಇದ್ದರು.

ಶಾಲೆ ಮತ್ತು ಅಂಗನವಾಡಿ ಅಭಿವೃದ್ಧಿಗೆ ಆದ್ಯತೆ ನೀಡಿ ‘ಜಿಲ್ಲೆಯ ಖನಿಜ ಪ್ರತಿಷ್ಠಾನ ನಿಧಿಯಲ್ಲಿನ ಮೊತ್ತದಲ್ಲಿ ಜಿಲ್ಲೆಯಾದ್ಯಂತ ಅಂಗನವಾಡಿ ಮತ್ತು ಶಾಲೆಗಳ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಇದಕ್ಕೆ ಪೂರಕ ಕ್ರಿಯಾಯೋಜನೆ ಸಿದ್ಧಪಡಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೂಚಿಸಿದರು. ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಅವರು ‘ಮಳೆಯಿಂದ ಶಿಥಿಲಗೊಂಡ ಶಾಲೆ ಅಂಗನವಾಡಿಗಳ ಕೊಠಡಿ ಮರುನಿರ್ಮಾಣ ಸೇರಿದಂತೆ ಅವುಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಅನುದಾನ ಬಳಕೆಯಾಗಬೇಕು’ ಎಂದರು. ‘ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯಲ್ಲಿ ಪ್ರಸ್ತುತ ಸಾಲಿಗೆ ₹8.95 ಕೋಟಿ ಅನುದಾನವಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದರು.

ಹೌಸ್ ಬೋಟ್ ಪರಿಚಯಿಸುತ್ತೇವೆ ‘ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮುರುಡೇಶ್ವರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಹೌಸ್‍ಬೋಟ್ ಪರಿಚಯಿಸುವ ಕೆಲಸ ಮಾಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ‘ಕಡಲತೀರದದಲ್ಲಿ ಪ್ರವಾಸಿಗರನ್ನು ಸೆಳೆಯುವ ಚಟುವಟಿಕೆ ಕೈಗೊಳ್ಳಲು ಸಿ.ಆರ್.ಝಡ್ ನಿಯಮಾವಳಿ ಅಡ್ಡಿಯಾಗುತ್ತಿರುವುದು ನಿಜ. ನಿಯಮ ಸರಳೀಕರಣಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ. ರಾಜ್ಯದ 320 ಕಿ.ಮೀ ಕಡಲತೀರದ ಮರುನಕ್ಷೆ ಸಿದ್ಧಪಡಿಸಲಾಗಿದೆ’ ಎಂದು ಸಭೆ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.