ಭಟ್ಕಳ: ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಬಿಜೆಪಿಯವರೇ ಕಾರಣ ಎಂದು ಗೂಭೆ ಕೂರಿಸುತ್ತಿರುವ ಸಚಿವ ಮಂಕಾಳ ವೈದ್ಯ ಮತ್ತು ಹೊನ್ನಾವರ, ಭಟ್ಕಳ ಕಾಂಗ್ರೆಸ್ ಅಧ್ಯಕ್ಷರು ಶೀಘ್ರದಲ್ಲಿ ಮರಳು ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವುದು ಒಳಿತು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿದರು.
ಪಟ್ಟಣದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮದೇ ಸರ್ಕಾರ, ಅಧಿಕಾರದಲ್ಲಿದ್ದವರು, ಅದೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ತಲೆದೋರಿರುವ ಮರಳು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಜನರ ಮುಂದೆ ಅಳಲು ತೋಡಿಕೊಳ್ಳುವುದು ಸರಿಯಲ್ಲ ಎಂದರು.
ನಿಮ್ಮ ಅಧಿಕಾರದ ಅವಧಿಯಲ್ಲಿ ಚೀರೆ ಕಲ್ಲಿಗೂ ಸಮಸ್ಯೆ, ಮರಳಿಗೂ ಸಮಸ್ಯೆ ಎನ್ನುವಂತಾಗಿದ್ದು, ಮನೆ, ಕಟ್ಟಡ ನಿರ್ಮಿಸುವುದೇ ಕಷ್ಟವಾಗಿದೆ. ನಾನು ಅಧಿಕಾರದಲ್ಲಿದ್ದಾಗ ಯಾರಿಗೂ ತೊಂದರೆ ನೀಡಿರಲಿಲ್ಲ. ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಬಿಜೆಪಿಯವರೇ ಕಾರಣ ಎಂದು ಹೇಳುವ ಸಚಿವರು ಮತ್ತು ಕಾಂಗ್ರೆಸ್ ಅಧ್ಯಕ್ಷರು ಆರೋಪ ಮಾಡುತ್ತಿದ್ದಾರೆ. ಹಸಿರು ಪೀಠಕ್ಕೆ ಹೋಗಲು ಪ್ರೇರಿಪಿಸಿದವರು ಇವರೇ ಆಗಿದ್ದಾರೆ ಎಂದು ಗಂಭೀರ ಆರೋಪಿಸಿದರು.
ಸಚಿವರು ಮತ್ತು ಕಾಂಗ್ರೆಸ್ ಅಧ್ಯಕ್ಷರು ಮರಳು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ರಾಜಕೀಕರಣಗೊಳಿಸುತ್ತಿದ್ದಾರೆ. ಸಚಿವರು ಮರಳನ್ನು ಉದ್ಯಮವನ್ನಾಗಿ ಮಾಡಲು ಹೊರಟಿದ್ದಾರೆ. ಮರಳಿಲ್ಲದೇ ಜನರು, ಕೆಲಸಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಮನೆ, ಕಟ್ಟಡ ಕಾಮಗಾರಿಗೆ ಹಿನ್ನಡೆ ಆಗಿದೆ ಎಂದರು.
ಪಶ್ವಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಸುಬ್ರಾಯ ದೇವಡಿಗ, ಶ್ರೀಕಾಂತ ನಾಯ್ಕ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಭಟ್ಕಳ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಪ್ರಮುಖರಾದ ಭಾಸ್ಕರ ದೈಮನೆ, ಮೋಹನ ನಾಯ್ಕ, ಪ್ರಮೋದ ಜೋಷಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.