ಕಾರವಾರ: ‘ಸೂಪಾ ಜಲಾಶಯದಲ್ಲಿಕಳೆದ ವರ್ಷಕ್ಕಿಂತ ಈ ವರ್ಷ 13 ಮೀಟರ್ ಹೆಚ್ಚು ನೀರು ತುಂಬಿದೆ. ಕಾಳಿ ನದಿ ನೀರನ್ನು ಕೇವಲ ವಿದ್ಯುತ್ ಉತ್ಪಾದನೆಗಲ್ಲದೇ ದಾಂಡೇಲಿ, ಹಳಿಯಾಳ, ಅಳ್ನಾವರದಲ್ಲಿ ಕುಡಿಯಲೂ ಬಳಸಲಾಗುತ್ತದೆ. ಕಾಳಿ ನದಿ ಕಾಮಧೇನು ಇದ್ದಂತೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಜೊಯಿಡಾ ತಾಲ್ಲೂಕಿನ ಸೂಪಾ ಅಣೆಕಟ್ಟೆಗೆ ಬುಧವಾರ ಬಾಗಿನ ಅರ್ಪಿಸಿ ಸುದ್ದಿಗಾರರ ಜತೆ ಅವರು ಮಾತನಾಡಿದರು.
‘1987ರಲ್ಲಿ ಲೋಕಾರ್ಪಣೆಯಾದ ಈ ಅಣೆಕಟ್ಟೆಯಲ್ಲಿ 31 ವರ್ಷಗಳ ಅವಧಿಯಲ್ಲಿ ಕೇವಲ ನಾಲ್ಕು ಬಾರಿ ನೀರು ಗರಿಷ್ಠಮಟ್ಟ ತಲುಪಿದೆ. 1994, 2000, 2011 ಹಾಗೂ 2014ರಲ್ಲಿ ಅಣೆಕಟ್ಟೆ ಭರ್ತಿಯಾಗುವಷ್ಟು ಮಳೆಯಾಗಿತ್ತು. ಕಳೆದ ವರ್ಷ ಇದೇ ದಿನ 544 ಮೀಟರ್ ನೀರಿತ್ತು’ ಎಂದು ಮಾಹಿತಿ ನೀಡಿದರು.
ಅಣೆಕಟ್ಟೆ ಗರಿಷ್ಠಮಟ್ಟ ತಲುಪಿದರೆ ದಿನವೊಂದಕ್ಕೆ ಒಂದು ಕೋಟಿ ಯೂನಿಟ್‌ನಂತೆ ನಿರಂತರವಾಗಿ 300 ದಿನ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿದೆ.ಇನ್ನೂ ಕೆಲವು ದಿನ ಇದೇ ಪ್ರಮಾಣದಲ್ಲಿ ಮಳೆ ಮುಂದುವರಿದರೆ ಸೂಪಾ ಅಣೆಕಟ್ಟೆಯೂ ತನ್ನ ಗರಿಷ್ಠಮಟ್ಟ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇವೇಳೆ, ಅಣೆಕಟ್ಟೆಯ ಕ್ರಸ್ಟ್‌ಗೇಟ್‌ಗಳಿಂದ ಪರೀಕ್ಷಾರ್ಥವಾಗಿ ನೀರು ಹೊರಬಿಟ್ಟುಒಂದೆರಡುನಿಮಿಷಗಳ ಬಳಿಕ ಮುಚ್ಚಲಾಯಿತು. ಅಲ್ಲಿ ಸೇರಿದ್ದ ನೂರಾರು ಗ್ರಾಮಸ್ಥರು ಜಲಧಾರೆಯನ್ನು ಕಂಡು ಸಂಭ್ರಮದಿಂದ ಕೇಕೆ ಹಾಕಿದರು.
ಭರ್ತಿಗೆ ಇನ್ನೂ ಎಂಟು ಮೀಟರ್:ಸೂಪಾ ಅಣೆಕಟ್ಟೆ ಭರ್ತಿಯಾಗಲು ಇನ್ನೂ ಎಂಟು ಮೀಟರ್‌ಗಳಷ್ಟು ನೀರಿನ ಒಳಹರಿವು ಬೇಕಿದೆ.564 ಮೀಟರ್ ಗರಿಷ್ಠ ಮಟ್ಟವಿರುವ ಈ ಜಲಾಶಯದಲ್ಲಿ ಬುಧವಾರದವರೆಗೆ 556.95 ಮೀಟರ್ ನೀರು ಸಂಗ್ರಹವಾಗಿದೆ.145.33 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, 120 ಚದರ ಕಿಲೋಮೀಟರ್‌ಗಳಷ್ಟು ವಿಸ್ತಾರವಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಸಂತೋಷ ರೇಣಕೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸಂಜಯ ಹಣಬರ, ರಮೇಶ ನಾಯ್ಕ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಉಪಾಧ್ಯಕ್ಷವಿಜಯ ಪಂಡಿತ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಸೂಪಾ ಅಣೆಕಟ್ಟೆಯ ಪ್ರಭಾರ ಮುಖ್ಯ ಎಂಜಿನಿಯರ್ ಟಿ.ಆರ್.ನಿಂಗಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.