ADVERTISEMENT

ಕಾರವಾರ: ರಸ್ತೆ ಸಂಪರ್ಕಕ್ಕೆ ವಿಶೇಷ ಅನುದಾನ

ವಿದ್ಯಾರ್ಥಿ ವಸತಿ ನಿಲಯಕ್ಕೆ ಶಾಸಕ ಸೈಲ್, ಡಿ.ಸಿ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 15:19 IST
Last Updated 3 ಮಾರ್ಚ್ 2024, 15:19 IST
ಕಾರವಾರ ತಾಲ್ಲೂಕಿನ ಶೇಜವಾಡದಲ್ಲಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭಾನುವಾರ ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಭೇಟಿ ನೀಡಿ ಪರಿಶೀಲಿಸಿದರು.
ಕಾರವಾರ ತಾಲ್ಲೂಕಿನ ಶೇಜವಾಡದಲ್ಲಿರುವ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭಾನುವಾರ ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಭೇಟಿ ನೀಡಿ ಪರಿಶೀಲಿಸಿದರು.   

ಕಾರವಾರ: ತಾಲ್ಲೂಕಿನ ಶೇಜವಾಡದಲ್ಲಿ ನಾಲ್ಕು ವರ್ಷಗಳ ಹಿಂದೆಯೇ ನಿರ್ಮಾಣಗೊಂಡಿದ್ದರೂ ಈವರೆಗೆ ಬಳಕೆಯಾಗದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭಾನುವಾರ ಕೆ.ಎಂ.ಸಿ.ಎ ಅಧ್ಯಕ್ಷರೂ ಆಗಿರುವ ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಭೇಟಿ ನೀಡಿ ಪರಿಶೀಲಿಸಿದರು.

‘ದಾರಿ ಇಲ್ಲದ ಜಾಗಕ್ಕೆ ಹಾಸ್ಟೆಲ್ ಕಟ್ಟಿದರು!’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಫೆ.27 ರಂದು ವರದಿ ಪ್ರಕಟಿಸಿತ್ತು. ಸುಮಾರು ₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಟ್ಟಡವು ಬಳಕೆಯಾಗದೆ ಗಿಡಗಂಟಿ ಬೆಳೆದುಕೊಂಡಿದ್ದಲ್ಲದೆ, ವಸತಿ ನಿಲಯಕ್ಕೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದ ಸಮಸ್ಯೆ ಬಗ್ಗೆ ಗಮನಸೆಳೆಯಲಾಗಿತ್ತು.

ವಸತಿ ನಿಲಯದ ಆವರಣದಲ್ಲಿ ಬೆಳೆದುಕೊಂಡಿದ್ದ ಗಿಡಗಂಟಿಗಳನ್ನು ತೆರವುಗೊಳಿಸುವ ಜತೆಗೆ ಕಟ್ಟಡದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಶಾಸಕ, ಜಿಲ್ಲಾಧಿಕಾರಿ ಭೇಟಿ ನೀಡಿ ಕಟ್ಟಡದ ಸದ್ಯದ ಸ್ಥಿತಿಗತಿ ಪರಿಶೀಲಿಸಿದರು.

ADVERTISEMENT

‘ವಸತಿ ನಿಲಯಕ್ಕೆ ನೀರು, ವಿದ್ಯುತ್ ಸಂಪರ್ಕದ ವ್ಯವಸ್ಥೆ ಆಗಬೇಕಿದೆ. ಈ ಸೌಲಭ್ಯ ಕಲ್ಪಿಸಲು ಅನುದಾನ ಲಭ್ಯವಿದ್ದು ಕಾಮಗಾರಿಗೆ ಅನುಮೋದನೆ ನೀಡಲಾಗುವುದು. ರಸ್ತೆ ಸಂಪರ್ಕಕ್ಕೆ ಸುಮಾರು ₹30 ಲಕ್ಷ ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿದ್ದು ಶಾಸಕರ ವಿಶೇಷ ಅನುದಾನಕ್ಕೆ ಕೋರಲಾಗಿದೆ. ಎಲ್ಲ ಸೌಲಭ್ಯ ಕಲ್ಪಿಸಿ ಮುಂಬರುವ ಶೈಕ್ಷಣಿಕ ವರ್ಷದ ಒಳಗೆ ವಸತಿ ನಿಲಯ ಕಾರ್ಯಾರಂಭಕ್ಕೆ ಕ್ರಮ ವಹಿಸಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಪ್ರತಿಕ್ರಿಯಿಸಿದರು.

‘ವಸತಿ ನಿಲಯಕ್ಕೆ ಸಂಪರ್ಕಿಸಲು ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ಒದಗಿಸಲಾಗುವುದು’ ಎಂದು ಶಾಸಕ ಸತೀಶ ಸೈಲ್ ಹೇಳಿದರು.

ವಸತಿ ನಿಲಯಕ್ಕೆ ಉಪಲೋಕಾಯುಕ್ತ ಎಸ್.ಎನ್.ಫಣೀಂದ್ರ ಅವರು ಭೇಟಿ ನೀಡಿ ಪರಿಶೀಲಿಸಿದರು.

‘ಪ್ರಜಾವಾಣಿ’ಯಲ್ಲಿ ಫೆ.27 ರಂದು ಪ್ರಕಟವಾಗಿದ್ದ ವಿಶೇಷ ವರದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.