ಅಂಕೋಲಾ: ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಮಂಗಳವಾರ ತಾಲ್ಲೂಕಿನ ವಂದಿಗೆ ಗ್ರಾಮದ ಗದ್ದೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿ ಉಳುಮೆ ಮಾಡಿದರು. ‘ಫಲವತ್ತತೆಯೆಡೆಗೆ ಮೊದಲ ಹೆಜ್ಜೆ’ ಎಂಬ ಕೃಷಿ ಚಟುವಟಿಕೆಗೆ ವಿನೂತನವಾಗಿ ಚಾಲನೆ ನೀಡಿದರು.
ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕೃಷಿ ಚಟುವಟಿಕೆ ಉತ್ತೇಜಿಸಲು ಮತ್ತು ಯುವಜನರನ್ನು ಕೃಷಿಯತ್ತ ಆಕರ್ಷಿಸಲು 50 ಎಕರೆ ಗೇಣಿ ಭೂಮಿ ಪಡೆದು ಕೃಷಿ ಮಾಡುವುದಾಗಿ ಶಾಸಕಿ ಹಿಂದೆ ತಿಳಿಸಿದ್ದರು.
‘ನಷ್ಟದ ಭಯದಿಂದ ಜನತೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಯುವಕರು ಕೃಷಿ ಬಿಟ್ಟ ಪರಿಣಾಮ ಭೂಮಿ ಬಂಜರಾಗುತ್ತಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಆಹಾರ ಮತ್ತು ಕೃಷಿ ಅಗತ್ಯ ಜನರಿಗೆ ಅರ್ಥವಾಗಿದೆ. ತಾಲ್ಲೂಕಿನ ಕೃಷಿ ವಿಧಾನದಲ್ಲಿ ಬದಲಾವಣೆ ತರಲು ಮತ್ತು ರೈತರನ್ನು ಉತ್ತೇಜಿಸಲು ಈ ಪ್ರಯತ್ನ ಆರಂಭಿಸಿದ್ದೇನೆ. ಇದು ನನ್ನ ಕನಸಿನ ಕೂಸು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಿ, ಸ್ಥಳೀಯ ರೈತರಿಗೆ ಹೆಚ್ಚಿನ ಸೌಲಭ್ಯ ಸಿಗುವಂತೆ ಪ್ರಯತ್ನಿಸುತ್ತೇವೆ’ ಎಂದು ಶಾಸಕಿ ರೂಪಾಲಿ ಹೇಳಿದರು.
ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ‘ನುಡಿದಂತೆ ನಡೆಯುವುದು ರಾಜಕೀಯದಲ್ಲಿ ವಿರಳ. ಶಾಸಕಿ ರೂಪಾಲಿ ಗದ್ದೆಗಿಳಿದು ಕೃಷಿಯಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ಅಭಿವೃದ್ಧಿ ಚಟುವಟಿಕೆಯಲ್ಲಿಯೂ ಮುಂದಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.