ಕಾರವಾರ: ‘ಕಾರವಾರ–ಕೋಡಿಬಾಗ ರಸ್ತೆಯಲ್ಲಿ ಅಳವಡಿಕೆಯಾಗುತ್ತಿರುವ ಮಾದರಿಯ ಬೀದಿದೀಪಗಳನ್ನು ಶಾಸಕಿ ರೂಪಾಲಿ ನಾಯ್ಕ ಮನೆಯ ರಸ್ತೆಗೂ ಅಳವಡಿಸಲಾಗುತ್ತಿದೆ. ಬೀದಿದೀಪ ಅಳವಡಿಕೆ ಬಗ್ಗೆ ಅಧಿಕಾರಿಗಳಿಗೂ ಸ್ಪಷ್ಟತೆ ಇಲ್ಲ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆರೋಪಿಸಿದರು.
‘ದೇವಳಿವಾಡಾದಲ್ಲಿರುವ ಶಾಸಕರ ಮನೆಯ ರಸ್ತೆಗೆ ಅಳವಡಿಸಲಾದ ಹೊಸ ಬೀದಿದೀಪಗಳ ಬಗ್ಗೆ ನಗರಸಭೆಯಲ್ಲಿ ವಿಚಾರಿಸಿದರೆ ದಾಖಲೆ ಇಲ್ಲ. ಅವರು ಪಿಡಬ್ಲ್ಯೂಡಿ ಅಧಿಕಾರಿಗಳತ್ತ ಬೊಟ್ಟು ತೋರಿಸಿದ್ದಾರೆ. ಪಿಡಬ್ಲ್ಯೂಡಿ ಎಂಜಿನಿಯರ್ ಗಳನ್ನು ವಿಚಾರಿಸಿದರೆ ಅವರೂ ಈ ಬಗ್ಗೆ ದಾಖಲೆ ನೀಡಿಲ್ಲ. ಹೀಗಾಗಿ ಅಧಿಕಾರ ದುರ್ಬಳಕೆ ಮಾಡಿರುವ ಶಂಕೆ ಮೂಡಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ಐದು ವರ್ಷಗಳಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ಸ್ಥಳೀಯ ಗುತ್ತಿಗೆದಾರರನ್ನು ನಿರ್ಲಕ್ಷಿಸಲಾಗಿದೆ. ಹೊರಗಿನವರಿಗೆ ಗುತ್ತಿಗೆ ನೀಡಲಾಗಿದೆ. ಶಾಸಕರ ಪುತ್ರನ ಬಳಿ ಕೋಟ್ಯಂತರ ಮೌಲ್ಯದ ವಾಹನಗಳಿದ್ದು ಅವುಗಳಲ್ಲಿ ಬಹುತೇಕ ಬೇನಾಮಿ ಹೆಸರಿನಲ್ಲಿವೆ’ ಎಂದು ಆರೋಪಿಸಿದರು.
ರಾಜೇಂದ್ರ ಅಂಚೇಕರ್, ಶ್ವೇತಾ ನಾಯ್ಕ, ರಾಘವೇಂದ್ರ ನಾಯ್ಕ, ಸಿ.ಎನ್.ನಾಯ್ಕ, ಬಾಬು ಶೇಖ್, ಸೂರಜ್ ಕೂರ್ಮಕರ, ಅಜಯ ಸಿಗ್ಲಿ, ನಿತ್ಯಾನಂದ ನಾಯ್ಕ, ಅಭಿ ಕಳಸ, ಹನೀಫ್ ಖುರೇಶಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.