ADVERTISEMENT

ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ಪ್ರತಿಭಟನೆ: ಹಟ್ಟಿಕೇರಿ ಟೋಲ್ ಸಂಗ್ರಹ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 7:49 IST
Last Updated 11 ಜುಲೈ 2023, 7:49 IST
   

ಕಾರವಾರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿಯಲ್ಲಿರುವ ಟೋಲ್ ಗೇಟ್‌ನಲ್ಲಿ ಮಂಗಳವಾರದಿಂದ ಟೋಲ್ ಸಂಗ್ರಹ ಸ್ಥಗಿತಗೊಂಡಿತು.

ಅಸಮರ್ಪಕವಾಗಿ ಹೆದ್ದಾರಿ ಕಾಮಗಾರಿ ನಡೆಸಿರುವ ಜತೆಗೆ ಕಾರವಾರದಲ್ಲಿ ಸುರಂಗ ಮಾರ್ಗ ಬಳಕೆಗೆ ಸುರಕ್ಷತಾ ಪ್ರಮಾಣ ಪತ್ರ ಪಡೆಯದ ಹಿನ್ನೆಲೆಯಲ್ಲಿ ಟೋಲ್ ಸಂಗ್ರಹವನ್ನೂ ಸ್ಥಗಿತಗೊಳಿಸಲು ಶಾಸಕ ಸತೀಶ ಸೈಲ್ ನೇತೃತ್ವದಲ್ಲಿ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದ ಐ.ಆರ್.ಬಿ ಅಧಿಕಾರಿಗಳು ತಾತ್ಕಾಲಿಕವಾಗಿ ಟೋಲ್ ಸಂಗ್ರಹ ಸ್ಥಗಿತಗೊಳಿಸುವುದಾಗಿ ಘೋಷಿಸಿದರು.

'ಸುರಕ್ಷತಾ ಪ್ರಮಾಣ ಪತ್ರ ಪಡೆಯದೆ ಸುರಂಗ ಮಾರ್ಗ ಸಂಚಾರಕ್ಕೆ ಮುಕ್ತ ಮಾಡಿ ಜನರ ಜೀವದ ಜತೆ ಐ.ಆರ್.ಬಿ ಚೆಲ್ಲಾಟವಾಡುತ್ತಿದೆ. ಅಮದಳ್ಳಿ, ಚೆಂಡಿಯಾ ಸೇರಿ ಹಲವೆಡೆ ರಸ್ತೆ ಕಾಮಗಾರಿ ಸರಿಯಾಗಿ ನಡೆಸಿಲ್ಲ. ಭೂಕುಸಿತ ತಡೆಗೆ ಸೂಕ್ತ ಕ್ರಮ ವಹಿಸಿಲ್ಲ. ಸುರಕ್ಷತಾ ಕ್ರಮ ಕೈಗೊಳ್ಳುವ ಜತೆಗೆ ಸುರಂಗ ಮಾರ್ಗ ಬಳಕೆಗೆ ಸುರಕ್ಷತಾ ಪ್ರಮಾಣ ಪತ್ರ ಪಡೆದು ಮಾರ್ಗ ಸಂಚಾರಕ್ಕೆ ಮುಕ್ತವಾಗಿಸುವವರೆಗೆ ಟೋಲ್ ಸಂಗ್ರಹಿಸಬಾರದು' ಎಂದು ಶಾಸಕ ಸತೀಶ ಸೈಲ್ ತಾಕೀತು ಮಾಡಿದರು.

ADVERTISEMENT

ಜುಲೈ 8 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸಭೆ ನಡೆಸಿದ್ದ ವೇಳೆ ಹೆದ್ದಾರಿ ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಳಿಸುವವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು ಎಂದು ಎಚ್ಚರಿಸಿದ್ದರು.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಕೋಲಾದ ಹಟ್ಟಿಕೇರಿ, ಕುಮಟಾ ತಾಲ್ಲೂಕಿನ ಹೊಳೆಗದ್ದೆ, ಭಟ್ಕಳ ತಾಲ್ಲೂಕಿನ ಗಡಿಭಾಗದ ಟೋಲ್ ಗೇಟ್‌ಗಳಲ್ಲಿ 2020ರಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿತ್ತು. ಸ್ಥಳೀಯ ನೊಂದಣಿಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಲಾಗಿತ್ತು. ಸದ್ಯ ಹಟ್ಟಿಕೇರಿ ಟೋಲ್ ಸಂಗ್ರಹ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.