ಶಿರಸಿ: ‘ನನ್ನ ರಾಜಕೀಯ ಜೀವನದ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಚಿಂತಿಸುವ ಅಗತ್ಯವಿಲ್ಲ’ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.
ತಾಲ್ಲೂಕಿನ ಗುಡ್ನಾಪುರ ಕೆರೆ ತುಂಬಿದ ಹಿನ್ನೆಲೆ ಸೋಮವಾರ ಬಾಗಿನ ಸಮರ್ಪಿಸಿ ನಂತರ ಸಂಸದ ಕಾಗೇರಿ ಇತ್ತೀಚೆಗೆ ನೀಡಿದ್ದ ‘ಭವಿಷ್ಯದಲ್ಲಿ ಹೆಬ್ಬಾರ್ ರಾಜಕೀಯ ಜೀವನ ಕಷ್ಟವಾಗಲಿದೆ‘ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಮತದಾರರಿಗೆ ಬಾಧ್ಯಸ್ಥ. ಕಾಗೇರಿಯವರು ಅವರ ರಾಜಕೀಯ ಜೀವನ ನೋಡಿಕೊಳ್ಳಲಿ. ನಾನು ಬೇಕೋ, ಬೇಡವೋ ಎಂಬುದನ್ನು ನನ್ನ ಕ್ಷೇತ್ರದ ಮತದಾರರು ನಿರ್ಧರಿಸುತ್ತಾರೆ. ಅಭಿವೃದ್ಧಿ ಕೆಲಸ ಮಾಡಿಯೇ ಚುನಾವಣೆಗೆ ಮತ ಕೇಳುತ್ತೇನೆ’ ಎಂದರು.
‘ಬಿಜೆಪಿ ಶಿಸ್ತಿನ ಪಕ್ಷ ಎನ್ನುವ ಬಿಜೆಪಿಗರು ಹೇಗೆ ವರ್ತಿಸುತ್ತಿದ್ದಾರೆ, ಈ ಹಿಂದೆ ಏನೆಲ್ಲ ಮಾಡಿದ್ದಾರೆ ಎಂಬುದು ಹೊರಬರಲಿದೆ. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಯಡಿಯೂರಪ್ಪ ಕುಟುಂಬ ಬಗ್ಗೆ ಸದನದ ಒಳಗೆ, ಹೊರಗೆ ಪುಂಖಾನುಪುಂಖವಾಗಿ ಮಾತನಾಡಿದ್ದಾರೆ. ಯಾರಿಂದ ಏನು ಮಾಡಲಾಯಿತು? ನಮ್ಮಂಥವರು ಒಂದೆರಡು ಮಾತನಾಡಿದರೆ ಕಷ್ಟವಾಗುತ್ತದೆ. ಈಗ ಬಿಜೆಪಿ ಶಿಸ್ತಿನ ಪಕ್ಷದ ಬದಲು ಅಶಿಸ್ತಿನ ಪಕ್ಷವಾಗಿದೆ’ ಎಂದರು.
‘ಜಿಲ್ಲೆಯ ಹಿರಿಯ ರಾಜಕೀಯ ನಾಯಕ ಆರ್.ವಿ.ದೇಶಪಾಂಡೆ ಸಿಎಂ ರೇಸಿನಲ್ಲಿರುವುದು ಖುಷಿಯಿದೆ. ಅವರು ಆ ಸ್ಥಾನಕ್ಕೇರಿದರೆ ಜಿಲ್ಲೆಯ ಅಭಿವೃದ್ಧಿ ಆಗುತ್ತದೆ. ಹೀಗಾಗಿ ಪಕ್ಷಾತೀತವಾಗಿ ಅವರನ್ನು ಬೆಂಬಲಿಸುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಗುಡ್ನಾಪುರ ಕರೆ ತುಂಬಿದರೆ ಮೇಲೆ ಮತ್ತು ಕೆಳ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುತ್ತದೆ. ರೈತರ ಜೀವನಾಡಿಯಾಗಿರುವ ಕೆರೆ ತುಂಬಿ ದೇಶಕ್ಕೆ ಅನ್ನ ನೀಡುವ ಅನ್ನದಾತ ಸುಭಿಕ್ಷವಾಗಿರಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದ್ದು, ಕೆರೆ ತುಂಬಿದಾಗ ಪ್ರತಿ ವರ್ಷವೂ ಬಾಗಿನ ಅರ್ಪಿಸುವ ಸಂಪ್ರದಾಯ ರೂಢಿಸಿಕೊಂಡಿದ್ದೇನೆ’ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಶಿವಾಜಿ ಬನವಾಸಿ, ಸಿ.ಎಫ್.ನಾಯ್ಕ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.