ಮುಂಡಗೋಡ: ಹಾನಗಲ್ ತಾಲ್ಲೂಕಿನ ರೈತರ ಜೀವನಾಡಿ ಆಗಿರುವ, ತಾಲ್ಲೂಕಿನ ಧರ್ಮಾ ಜಲಾಶಯ ಮೈದುಂಬಿ ಹರಿಯುತ್ತಿರುವುದರಿಂದ ರೈತರಿಗೆ ಸಂತಸವಾಗಿದೆ. ತಾಲ್ಲೂಕಿನ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೇ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಕೋಡಿ ಬಿದ್ದಿರುವ ತಾಲ್ಲೂಕಿನ ಧರ್ಮಾ ಜಲಾಶಯಕ್ಕೆ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರ ಜೊತೆಗೂಡಿ ಗುರುವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಧರ್ಮಾ ಜಲಾಶಯದ ಪಾಲಿಗೆ ಮುಂಡಗೋಡ ತಾಲ್ಲೂಕು ಹೆಣ್ಣಿನ ಮನೆಯವರು ಇದ್ದಂತೆ. ಹಾನಗಲ್ ತಾಲ್ಲೂಕಿನ ರೈತರು ಗಂಡಿನ ಮನೆಯವರು. ಬಾಗಿನ ಕೊಟ್ಟು, ನೀರು ಕೊಟ್ಟು ಕಳಿಸುತ್ತಿದ್ದೇವೆ. ಅದನ್ನು ಜೋಪಾನವಾಗಿ ಬಳಸುವಂತಹ ಕೆಲಸವನ್ನು ಹಾನಗಲ್ ತಾಲ್ಲೂಕಿನ ಶಾಸಕರು ಹಾಗೂ ರೈತರು ಮಾಡಿಕೊಳ್ಳಬೇಕು. ಈ ಸಲ ಉತ್ತಮ ಮಳೆಯಿಂದ ರಾಜ್ಯದ 11 ಜಲಾಶಯಗಳ ಪೈಕಿ 9 ಭರ್ತಿಯಾಗಿವೆ ಎಂದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ರೈತರ ಜೊತೆಗೂಡಿ ಧರ್ಮಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗಿದೆ. ಎಂಟತ್ತು ವರ್ಷಗಳಿಂದ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿದ್ದು, ಉತ್ತಮ ಬೆಳೆಯೊಂದಿಗೆ ತಕ್ಕ ಬೆಲೆ ಸಿಗುವ ವಿಶ್ವಾಸವಿದೆ. ರಾಜ್ಯ ಸರ್ಕಾರ ಬಡ ಕುಟುಂಬಗಳ ಆರ್ಥಿಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಧರ್ಮಾ ಜಲಾಶಯದ ಆರಂಭದಿಂದ ಬಾಗಿನ ಕೊಡುವ ಸ್ಥಳದವರೆಗೆ ಆಕರ್ಷಕ ಡೊಳ್ಳಿನೊಂದಿಗೆ ರೈತರು ಮೆರವಣಿಗೆ ನಡೆಸಿದರು. ಜಲಾಶಯಕ್ಕೆ ಪ್ರವಾಸಿಗರ ನಿರ್ಬಂಧ ವಿಧಿಸಿರುವುದರಿಂದ, ಕಾಲ್ನಡಿಗೆಯಲ್ಲಿ ಮಾತ್ರ ಬಾಗಿನ ಕೊಡುವ ಸ್ಥಳದವರೆಗೆ ರೈತರಿಗೆ ಹೋಗಲು ಅವಕಾಶ ಕಲ್ಪಿಸಲಾಗಿತ್ತು.
ಮುಂಡಗೋಡ ತಹಶೀಲ್ದಾರ್ ಶಂಕರ ಗೌಡಿ, ಹಾನಗಲ್ ತಹಶೀಲ್ದಾರ್ ರೇಣುಕಾ, ಸ್ಥಳೀಯ ಮುಖಂಡರಾದ ಪ್ರಮೋದ ಡವಳೆ, ಚೇತನ ನಾಯ್ಕ, ಹಾನಗಲ್ ತಾಲ್ಲೂಕಿನ ರೈತ ಮುಖಂಡರು, ಜನಪ್ರತಿನಿಧಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.