ಅಂಕೋಲಾ: ತಾಲ್ಲೂಕು ಕೇಂದ್ರಕ್ಕೆ ಹೊಂದಿಕೊಂಡಿರುವ ಇಲ್ಲಿನ ಬೊಬ್ರುವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಮಂಗವೊಂದು ಮಹಿಳೆ ಮತ್ತು ಮಕ್ಕಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. 10ಕ್ಕೂ ಹೆಚ್ಚು ಜನರಿಗೆ ಕಚ್ಚಿ ಗಾಯಗೊಳಿಸಿದೆ.
10 ದಿನಗಳ ಹಿಂದೆ ಗುಂಪಿನಿಂದ ಬೇರ್ಪಟ್ಟ ಒಂಟಿ ಮಂಗವೊಂದು ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಗ್ರಾಮದ ಕೆಲವರು ನೀಡಿದ ಆಹಾರವನ್ನು ಶಾಂತವಾಗಿ ಸ್ವೀಕರಿಸಿತ್ತು. ಆದರೆ, ಮೂರು ದಿನಗಳಿಂದ ತೀವ್ರವಾಗಿ ಉಪಟಳ ನೀಡುತ್ತಿದೆ.
ಇದರಿಂದ ಬೇಸತ್ತ ಗ್ರಾಮಸ್ಥರು ಮಂಗಳವಾರ ಸಂಜೆ ಮಂಗನನ್ನು ಸೆರೆಹಿಡಿಯಲು ಪ್ರಯತ್ನಿಸಿದರು. ವನ್ಯಜೀವಿ ತಜ್ಞ ಅಶೋಕ ನಾಯ್ಕ ತದಡಿ, ಉರಗತಜ್ಞ ಮಹೇಶ ನಾಯ್ಕ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಟ್ಟರು. ಹಲವು ಸರ್ಪ, ಚಿರತೆ, ಮಂಗ, ಮತ್ತಿತರ ಕಾಡು ಪ್ರಾಣಿಗಳ ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿರುವ ಅಶೋಕ ನಾಯ್ಕ ಅವರು, ಈ ಒಂಟಿ ಮಂಗವನ್ನು ಹಿಡಿಯಲು ಯತ್ನಿಸಿದರು. ಅವರನ್ನು ಮೂರು ಬಾರಿ ಕಚ್ಚಿ ಗಾಯಗೊಳಿಸಿತು.
ಇದೇವೇಳೆ, ಸಂಜೆ ಮನೆಯ ಮುಂದಿನ ಮರದಿಂದ ಮಾವಿನ ಹಣ್ಣು ಆರಿಸಲು ಬಂದಿದ್ದ ಮಹಿಳೆಗೂ ಕಚ್ಚಿ ತೀವ್ರವಾಗಿ ಗಾಯಗೊಳಿಸಿತು. ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಈ ಭಾಗದಲ್ಲಿ ಮಂಗನ ಉಪಟಳ ಅತ್ಯಂತ ಕಡಿಮೆ. ಹಾಗಾಗಿ ಮಂಗವನ್ನು ಹಿಡಿಯುವ ಸಲಕರಣೆಗಳು ಅರಣ್ಯ ಇಲಾಖೆಯ ಬಳಿಯಲ್ಲಿಲ್ಲ. ಅದನ್ನು ಸೆರೆಹಿಡಿಯುವ ತರಬೇತಿಯ ಕೊರತೆಯು ಇದೆ. ಹಾಗಾಗಿ ಕಾರ್ಯಚರಣೆ ವಿಳಂಬವಾಗುತ್ತಿದೆ’ ಎನ್ನುತ್ತಾರೆ ಉರಗ ತಜ್ಞ ಮಹೇಶ ನಾಯ್ಕ.
ಮಂಗಳವಾರ ಸಂಜೆಯವರೆಗೂ ಕಾರ್ಯಾಚರಣೆ ಮುಂದುರಿಯಿತು. ಅರಿವಳಿಕೆ ಮದ್ದು ಇಟ್ಟಿದ್ದ ಮೂರು ಬಾಳೆಹಣ್ಣುಗಳನ್ನು ಸಂಪೂರ್ಣವಾಗಿ ಸೇವಿಸಿದರೂ ಮಂಗ ಪ್ರಜ್ಞೆ ತಪ್ಪದೆ, ಓಡಾಡಿಕೊಂಡಿದೆ. ಸಂಜೆ ಅರಿವಳಿಕೆ ಔಷಧಿ ಅಳವಡಿಸಿ ಎರಡು ಬಾರಿ ಗುಂಡನ್ನು ಹಾರಿಸಿದಾಗ ತಪ್ಪಿಸಿಕೊಂಡಿತು.
‘ಮಹಿಳೆಯರು, ಮಕ್ಕಳು ಭಯಭೀತರಾಗಿದ್ದಾರೆ. ಮುಂಜಾನೆಯಿಂದ ಕಾರ್ಯಾಚರಣೆಯಲ್ಲಿ ತೊಡಗಿದ್ದರೂ ಮಂಗ ಸಿಕ್ಕಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಕಾಂತ ನಾಯ್ಕ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.