ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಅನುಷ್ಠಾನವಾಗಬೇಕಾಗಿರುವ ಮಹಾಯೋಜನೆಗೆ ಪುರಾತತ್ವ ಸ್ಮಾರಕಗಳು ಅಡ್ಡಿಯಾಗುವ ಸಾಧ್ಯತೆ ಇದೆ. ನೀಲ ನಕ್ಷೆಯಂತೆ ಯೋಜನೆಯ ಅನುಮೋದನೆಗೊಂಡರೆ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಲಿದೆ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಮುಂದಿನ ನಾಲ್ಕು ದಶಕಗಳ ಅಭಿವೃದ್ಧಿ ದೃಷ್ಟಿಕೋನ ಇರಿಸಿ ತಯಾರಿಸಲಾದ ಮಹಾಯೋಜನೆಯ ನಕ್ಷೆಯಲ್ಲಿ ಏಳು ಪುರಾತತ್ವ ಸ್ಮಾರಕಗಳನ್ನು ಗುರುತಿಸಲಾಗಿದೆ. ಅದರಲ್ಲೂ ಮಹಾಯೋಜನೆಯ ನಕ್ಷೆಯಲ್ಲಿ ಗುರುತಿಸಿರುವ ಏಳು ಸ್ಮಾರಕಗಳು ಇರುವುದು ಪಟ್ಟಣದ ಹೃದಯಭಾಗದಲ್ಲಿ.
ಶತಮಾನಗಳಷ್ಟು ಹಳೆಯದಾದ ಕಟ್ಟಡಗಳು ಶಿಥಲಾವಸ್ಥೆಯಲ್ಲಿದ್ದು ಭಾರತೀಯ ಪುರಾತ್ವತ ಸರ್ವೇಕ್ಷಣಾ ಇಲಾಖೆ ಪ್ರಕಾರ ಸ್ಮಾರಕ ಇರುವ 300 ಮೀಟರ್ ಸುತ್ತಮುತ್ತ ಯಾವುದೇ ಕಟ್ಟಡ ಕಟ್ಟಲು ಅನುಮತಿ ನೀಡುವುದಿಲ್ಲ.
‘ಪಟ್ಟಣದಲ್ಲಿ ಸ್ಮಾರಕ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಕಟ್ಟಡಗಳು ಶತಮಾನಗಳಿಂದ ಶಿಥಿಲಾವಸ್ಥೆಯಲ್ಲಿ ಇವೆ. ಪರವಾನಗಿ ಇರದ ಕಾರಣ ಕಟ್ಟಡ ನವೀಕರಣ ಸಾಧ್ಯವಾಗದೆ ಹಾಗೆಯೇ ಉಳಿದುಕೊಂಡಿದೆ. ಕೆಲವೊಂದು ಕಡೆ ಹೊಸ ಕಟ್ಟಡ ಕಟ್ಟಲು ಪರವಾನಗಿ ನೀಡದ ಕಾರಣ ಖಾಲಿ ಜಾಗವನ್ನು ಹಾಗೆಯೇ ಬಿಟ್ಟು ಬೇರೆ ಕಡೆ ವಾಸಿಸುತ್ತಿರುವ ಉದಾಹರಣೆ ಕೂಡ ಇದೆ. ಪುನಃ ಮಹಾ ಯೋಜನೆಯಲ್ಲಿ ಏಳು ಸ್ಮಾರಕವನ್ನು ತೋರಿಸಿ ಅನುಮೋದನೆ ಮಾಡಿದರೆ ಭಟ್ಕಳ ಶಾಶ್ವತವಾಗಿ ಹಿಂದುಳಿದ ಪ್ರದೇಶವಾಗಲಿದೆ’ ಎನ್ನುತ್ತಾರೆ ಸ್ಥಳೀಯರು.
‘ಮಹಾಯೋಜನೆಯಲ್ಲಿ ಪುರಾತತ್ವ ಇಲಾಖೆಯ ಏಳು ಸ್ಮಾರಕಗಳನ್ನು ಗುರುತಿಸಿ 300 ಮೀಟರ್ ಸುತ್ತಳತೆಯ ವಲಯ ಗುರುತಿಸಲಾಗಿದೆ. ಜನರು ಹೆಚ್ಚು ಭೇಟಿ ನೀಡುವ ಸ್ಮಾರಕಗಳ ಸುತ್ತ ಇರುವ ಪ್ರದೇಶವನ್ನು ಪುರಾತತ್ವ ಇಲಾಖೆ ಸ್ವಾಧೀನಪಡಿಸಿಕೊಳ್ಳಲು ಅವಕಾಶ ಇದೆ. ಪುರಸಭೆ ವ್ಯಾಪ್ತಿಯ ಸ್ಮಾರಕ ಸುತ್ತಮುತ್ತಲಿನ ಪ್ರದೇಶವನ್ನು ಪುರಾತತ್ವ ಇಲಾಖೆ ಸ್ವಾಧೀನಪಡಿಸಿಕೊಂಡು ಸೂಕ್ತ ಪರಿಹಾರ ವಿತರಣೆ ಮಾಡಬೇಕು. ಇಲ್ಲವೇ ಕಟ್ಟಡ ಕಟ್ಟಲು ಪರವಾನಗಿ ನೀಡಬೇಕು. ಎರಡೂ ಆಗದಿದಲ್ಲಿ ಮಹಾಯೋಜನೆ ನಕ್ಷೆಯಲ್ಲಿ ಸ್ಮಾರಕದ ನಿರ್ಬಂಧವನ್ನು ಅಳಿಸಲು ಕ್ರಮವಹಿಸಿಬೇಕು’ ಎಂದು ಒತ್ತಾಯಿಸುತ್ತಾರೆ ಪುರಸಭೆಯ ಅಧ್ಯಕ್ಷ ಪರ್ವೇಜ್ ಕಾಶೀಂಜೀ.
ಸ್ಮಾರಕಗಳು ಯಾವ್ಯಾವವು?
ರಘುನಾಥ ರಸ್ತೆಯಲ್ಲಿರುವ ರಘುನಾಥ ದೇವಸ್ಥಾನ, ಸೋನಾರಕೇರಿಯಲ್ಲಿರುವ ವಿರೂಪಾಕ್ಷ ದೇವಸ್ಥಾನ, ಮುಖ್ಯ ರಸ್ತೆಯಲ್ಲಿರುವ ಜಟ್ಟಪ್ಪ ನಾಯಕ ಬಸೀದಿ, ಹೂವಿನ ಮಾರುಕಟ್ಟೆ ಬಳಿ ಇರುವ ಪಾಶ್ವನಾಥ ಬಸೀದಿ, ಡೊಂಗರಪಳ್ಳಿಯಲ್ಲಿರುವ ಯರೋಪಿಯನ್ ಗೋರಿ, ಮೂಡಭಟ್ಕಳದಲ್ಲಿರುವ ಕೆತಪೈ ನಾರಾಯಣ ದೇವಸ್ಥಾನ, ಮಾರುತಿ ನಗರ ಪಟ್ಟದ ಹೊಳೆ ಹತ್ತಿರದ ಲಕ್ಷ್ಮೀ ನಾರಾಯಣ ದೇವಸ್ಥಾನಗಳು ಪುರಾತತ್ವ ಇಲಾಖೆ ಅಧೀನದ ಸ್ಮಾರಕಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.