ADVERTISEMENT

ಸಂವಿಧಾನ ತಿದ್ದುಪಡಿ ಅವಶ್ಯಕತೆ ಇದೆ: ಅನಂತಕುಮಾರ ಹೆಗಡೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2024, 14:32 IST
Last Updated 9 ಮಾರ್ಚ್ 2024, 14:32 IST
ಸಿದ್ದಾಪುರ ತಾಲ್ಲೂಕಿನ ಹಲಗೇರಿಯ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಸಂಸದ ಅನಂತಕುಮಾರ ಹೆಗಡೆ ಮಾತನಾಡಿದರು.
ಸಿದ್ದಾಪುರ ತಾಲ್ಲೂಕಿನ ಹಲಗೇರಿಯ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಸಂಸದ ಅನಂತಕುಮಾರ ಹೆಗಡೆ ಮಾತನಾಡಿದರು.   

ಸಿದ್ದಾಪುರ: ‘ಕಾಂಗ್ರೆಸ್‍ನವರು ಸಂವಿಧಾನದಲ್ಲಿ ಬೇಡದ್ದೆನ್ನೆಲ್ಲ ಸೇರಿಸಿದ್ದು, ಅದರ ತಿದ್ದುಪಡಿ ಮಾಡಬೇಕಿದೆ. ಇದಕ್ಕಾಗಿ ಲೋಕಸಭೆಯಲ್ಲಿ ಬಿಜೆಪಿ 400ಕ್ಕಿಂತಲೂ ಹೆಚ್ಚು ಸ್ಥಾನವನ್ನು ಗೆಲ್ಲಬೇಕಾಗಿದೆ’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ತಾಲ್ಲೂಕಿನ ಹಲಗೇರಿಯ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ದೇಶ ಬದಲಾಗಬೇಕಾದರೆ ಹಿಂದೂಗಳಿಂದ ಮಾತ್ರ ಸಾಧ್ಯ. ಜಾತ್ಯತೀತರು ಎನ್ನುವವರಿಂದ ಇದು ಸಾಧ್ಯವಿಲ್ಲ. ಹಿಂದೂತ್ವದ ಅಭಿಲಾಷೆಯುಳ್ಳ ಬಿಜೆಪಿಗೆ ಮತ ನೀಡಬೇಕು’ ಎಂದರು.

‘ಸಾವಿರ ವರ್ಷದಿಂದ ಹಿಂದೂ ಸಮಾಜವನ್ನು ತುಳಿಯಲಾಗುತ್ತಿದೆ. ಈಗ ಉತ್ತರ ಕೊಡುವ ಸ್ಥಾನಕ್ಕೆ ಬಂದಿದ್ದೇವೆ. ಜಗತ್ತು ನಮ್ಮ ಕಡೆಗೆ ತಿರುಗಿ ನೋಡುತ್ತಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ’ ಎಂದು ಹೇಳಿದರು. 

ADVERTISEMENT

ರಾಜ್ಯಸಮಿತಿ ಸದಸ್ಯ ಕೆ.ಜಿ.ನಾಯ್ಕ ಮಾತನಾಡಿ, ‘ನಮ್ಮ ರಾಷ್ಟ್ರ ಹಾಗೂ ಧರ್ಮದ ಬಗ್ಗೆ ಯೋಚನೆ ಮಾಡುವ ಸಂಸದರ ಅವಶ್ಯಕತೆ ಇದೆ. ಅನಂತಕುಮಾರ ಈ ದಿಸೆಯಲ್ಲಿ ಪ್ರಥಮವಾಗಿ ನಿಲ್ಲುತ್ತಾರೆ’ ಎಂದು ಹೇಳಿದರು.

ಡಾ.ಶಶಿಭೂಷಣ ಹೆಗಡೆ ಮಾತನಾಡಿ, ‘ಸಂದಿಗ್ಧ ಸ್ಥಿತಿಯಲ್ಲಿದ್ದ ದೇಶದ ಆರ್ಥಿಕತೆ ಚೇತರಿಕೆಯಾಗುತ್ತಿರುವ ಈ ಹಂತದಲ್ಲಿ ನರೇಂದ್ರ ಮೋದಿಯಂತವರ ನೇತೃತ್ವದ ಅವಶ್ಯಕತೆ ಇದೆ. ಹೀಗಾಗಿ ಬಿಜೆಪಿ ಗೆಲುವಿಗೆ ಪ್ರಯತ್ನ ಮಾಡಬೇಕು’ ಎಂದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಮಡಿವಾಳ, ಪದಾಧಿಕಾರಿಗಳಾದ ನಾಗರಾಜ ನಾಯ್ಕ ಬೆಡ್ಕಣಿ,ಕೃಷ್ಣಮೂರ್ತಿ ಕಡಕೇರಿ,ಎಸ.ಕೆ.ಮೆಸ್ತ, ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.