ಶಿರಸಿ: ಹಿಂದೂಗಳ ಭಾವನೆಗೆ ಧಕ್ಕೆ ತರುವ ಜಾಹೀರಾತಿನಲ್ಲಿ ನಟಿಸಿರುವ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಕಿಡಿಕಾರಿದ್ದಾರೆ.
ಸಿಯಟ್ ಕಂಪನಿಯ ಜಾಹೀರಾತು ಒಂದರಲ್ಲಿ ಅಮೀರ್ ಹಬ್ಬದ ಆಚರಣೆಗೆ ಪಟಾಕಿ ಸಿಡಿಸುವುದು ಪರಿಸರಕ್ಕೆ ಮಾರಕ ಎಂಬ ಸಂದೇಶ ಸಾರಿದ್ದರು. ಈ ಜಾಹೀರಾತು ಹಿಂಪಡೆಯಬೇಕು ಎಂದು ಅನಂತಕುಮಾರ್ ಕಂಪನಿಯ ಮಾಲೀಕ ಅನಂತ ವರ್ಧನ್ ಗೋಯಂಕ ಅವರಿಗೆ ಅ.14 ರಂದು ಪತ್ರ ಬರೆದಿದ್ದಾರೆ.
‘ರಸ್ತೆಯಲ್ಲಿ ಪಟಾಕಿ ಸಿಡಿಸಿದರೆ ಸಂಚಾರಕ್ಕೆ ಸಮಸ್ಯೆ ಆಗುವುದಾದರೆ ವಿಶೇಷ ದಿನಗಳಲ್ಲಿ ರಸ್ತೆಯಲ್ಲೇ ನಮಾಜ್ ಮಾಡುವುದರಿಂದಲೂ ಓಡಾಟಕ್ಕೆ ತೊಂದರೆಯಾಗುತ್ತದೆ. ಪಟಾಕಿಯಿಂದ ಶಬ್ದ ಮಾಲಿನ್ಯ ಆಗುವುದಾದರೆ, ಪ್ರತಿದಿನ ಮುಂಜಾನೆ ಧ್ವನಿವರ್ಧಕದ ಮೂಲಕ ಆಜಾನ್ ಮಾಡುವುದರಿಂದಲೂ ಆಗುತ್ತದೆ. ಇವನ್ನೂ ಜನರಿಗೆ ತೋರಿಸಬೇಕಲ್ಲವೆ’ ಎಂದು ಅವರು ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅನಂತಕುಮಾರ್, ‘ಹಿಂದೂಗಳ ಆಚರಣೆಗಳನ್ನು ಹೀಯಾಳಿಸುವುದೊಂದೆ ಇವರ ಕೆಲಸವೇ?’ ಎಂದು ಅಮೀರ್ ವಿರುದ್ಧ ಜರೆದಿದ್ದಾರೆ.
‘ಅನ್ಯಧರ್ಮಗಳಲ್ಲಿ ನಡೆಯುವ ಎಷ್ಟೋ ಆಚರಣೆಗಳ ಬಗ್ಗೆ ಏಕೆ ಮೌನ? ಪ್ರತಿದಿನ ಬೆಳಗ್ಗೆ ಚೀರುವ ಧ್ವನಿವರ್ಧಕಗಳು, ರಸ್ತೆಗಳ ಮಧ್ಯದಲ್ಲಿ ನಮಾಜ್ ಮಾಡುವುದು ಇನ್ನು ಎಷ್ಟೋ ಆಚರಣೆಗಳ ಬಗ್ಗೆ ಅಮೀರ್ ಖಾನ್ ಗಮನ ಹರಿಸಿದರೆ ಬಹಳಷ್ಟು ಸಮಸ್ಯೆಗಳು ಬಗೆಹರಿಯುತ್ತವೆ’ ಎಂದು ಅವರು ಬರೆದುಕೊಂಡಿದ್ದಾರೆ.
‘ಈ ರೀತಿಯ ಜಾಹೀರಾತುಗಳು ಹಿಂದೂಗಳ ಭಾವನೆಗಳನ್ನು ತುಳಿಯಲು ಮಾಡಿದ ಕ್ಷುಲ್ಲಕ ಕುತಂತ್ರವಲ್ಲದೆ ಮತ್ತೇನೂ ಅಲ್ಲ. ಭಾರತದಲ್ಲಿ ಇಂತಹ ಹಿಂದೂ ವಿರೋಧಿ ನಟರಿಗೇನು ಕಮ್ಮಿಯಿಲ್ಲ’ ಎಂದು ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.