ಕಾರವಾರ: ‘ಆನೆ ನಡೆದು ಹೋಗುವಾಗ ನಾಯಿಗಳು ಬೊಗಳುವುದು ಸಹಜ. ಅವು ಬೊಗಳಿದರೆ ಮಾತ್ರ ಆನೆಗೆ ಗತ್ತು ಬರುತ್ತದೆ’ ಎಂದು ಸಂಸದ ಅನಂತಕುಮಾರ ಹೆಗಡೆ ತಿಳಿಸಿದರು.
‘ಸಂವಿಧಾನ ತಿದ್ದುಪಡಿಗೆ ಬಿಜೆಪಿ 400 ಸ್ಥಾನ ಗೆಲ್ಲಬೇಕು’ ಎಂದು ಎರಡು ದಿನದ ಹಿಂದೆ ತಾವೇ ನೀಡಿದ್ದ ಹೇಳಿಕೆ ವಿವಾದದ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಅವರು ಸೋಮವಾರ ಅಂಕೋಲಾ ತಾಲ್ಲೂಕಿನ ಹಿಲ್ಲೂರಿನಲ್ಲಿ ಸೋಮವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪ್ರತಿಕ್ರಿಯಿಸಿದರು.
‘ವಿವಾದ ಸೃಷ್ಟಿಯಾದರೂ ದೃಢವಾಗಿ ನಿಲ್ಲುವುದು ನೈಜ ನಾಯಕತ್ವ. ಕಾರ್ಯಕರ್ತರು ವಿಚಲಿತರಾದರೆ, ನಾಯಕತ್ವ ಅಲುಗಾಡುತ್ತದೆ. ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ ಚರ್ಚೆಯನ್ನು ಕಡೆಗಣಿಸಿ, ಬಿಜೆಪಿಯನ್ನು ಗೆಲ್ಲಿಸುವುದಕ್ಕೆ ಕಾರ್ಯಕರ್ತರು ಹೆಚ್ಚಿನ ಆದ್ಯತೆ ಕೊಡಬೇಕು’ ಎಂದರು.
‘ಈ ಸಲದ ಚುನಾವಣೆಗೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಲವು ಆಕಾಂಕ್ಷಿಗಳು ಇದ್ದಾರೆ. ಇದು ಪಕ್ಷ ಉನ್ನತ ಮಟ್ಟಕ್ಕೆ ಬೆಳೆದಿದೆ ಎಂಬುದರ ಸಂಕೇತ. ಯಾರಿಗೇ ಅವಕಾಶ ಸಿಗಲಿ. ಒಟ್ಟಾರೆ ಬಿಜೆಪಿಯನ್ನು ಗೆಲ್ಲಿಸಬೇಕು’ ಎಂದರು.
ಗೋಕರ್ಣ ಬಿಜೆಪಿ ಮಹಾಶಕ್ತಿ ಕೇಂದ್ರದ ಸಭೆಯಲ್ಲಿ ಮಾತನಾಡಿದ ಅನಂತಕುಮಾರ, ‘ಆರ್ಟಿಕಲ್ 370 ರದ್ದು, ಅಯೋಧ್ಯೆ ರಾಮಮಂದಿರ ನಿರ್ಮಾಣವಷ್ಟೆ ಹಿಂದೂ ಸಮಾಜದ ಗುರಿಯಲ್ಲ. ಹಿಂದೂ ರಾಷ್ಟ್ರನಿರ್ಮಾಣ, ವಿಶ್ವದಾದ್ಯಂತ ಭಗವಾಧ್ವಜ ಹಾರಿಸುವುದು ಅಂತಿಮ ಗುರಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.