ADVERTISEMENT

ಜುಲೈ 15ರೊಳಗೆ ಸಮಸ್ಯೆ ಬಗೆಹರಿಸಿ: ಸಂಸದ ಅನಂತಕುಮಾರ ಹೆಗಡೆ ತಾಕೀತು

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 11:57 IST
Last Updated 23 ಜೂನ್ 2020, 11:57 IST
ಕಾರವಾರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿ.ಪಂ. ಸಿ.ಇ.ಒ ಮೊಹಮ್ಮದ್ ರೋಶನ್ ಚಿತ್ರದಲ್ಲಿದ್ದಾರೆ.
ಕಾರವಾರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಸಂಸದ ಅನಂತಕುಮಾರ ಹೆಗಡೆ ಮಾತನಾಡಿದರು. ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿ.ಪಂ. ಸಿ.ಇ.ಒ ಮೊಹಮ್ಮದ್ ರೋಶನ್ ಚಿತ್ರದಲ್ಲಿದ್ದಾರೆ.   

ಕಾರವಾರ: ‘ಜಿಲ್ಲೆಯಲ್ಲಿ ಬಿಎಸ್ಎನ್ಎಲ್ ಇಂಟರ್‌ನೆಟ್‌ಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಜುಲೈ 15ರ ಮೊದಲು ಬಗೆಹರಿಸಬೇಕು. ಬಳಕೆದಾರರಿಗೆ ವೇಗದ ಇಂಟರ್‌ನೆಟ್ ಲಭಿಸಬೇಕು’ ಎಂದು ಸಂಸದ ಅನಂತಕುಮಾರ ಹೆಗಡೆ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಬಿಎಸ್ಎನ್ಎಲ್, ಬಿಬಿಎ‌ನ್‍ಎಲ್, ಸಿಎಸ್‍ಸಿ, ಹೆಸ್ಕಾಂ, ನಾಡಕಚೇರಿ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ ಇಂಟರ್‌ನೆಟ್ ವೇಗ ತೀರಾ ಕಳಪೆಯಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಸಭೆ ಹಮ್ಮಿಕೊಳ್ಳಲಾಗಿತ್ತು.

‘ಇಂಟರ್‌ನೆಟ್ ವೇಗ ಕಡಿಮೆಯಾದಂತೆ ಸಾರ್ವಜನಿಕರ ಕೆಲಸಗಳಿಗೆ ಬಹಳ ತೊಂದರೆಯಾಗುತ್ತಿದೆ. ನೆಟ್‌ವರ್ಕ್ ಗುಣಮಟ್ಟದ ಸಂಬಂಧಪ್ರತಿ ತಿಂಗಳು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವರದಿ ಸಲ್ಲಿಸಬೇಕು. ರಾಜ್ಯದ ಇತರ ಸಂಸದರ ಜೊತೆಗೂ ನಾನು ಮಾತನಾಡಿದ್ದಾಗ, ನೆಟ್‌ವರ್ಕ್ ಸಮಸ್ಯೆಯ ಬಗ್ಗೆ ಹೇಳಿದ್ದಾರೆ. ಇದು ಇಡೀ ರಾಜ್ಯದ ಸಮಸ್ಯೆ. ಹಾಗಾಗಿ ಶೀಘ್ರವೇಎಲ್ಲ ಸಂಸದರ ಸಭೆ ಕರೆಯಬೇಕು’ ಎಂದು ಬಿ.ಎಸ್.ಎನ್.ಎಲ್.ನ ಹಿರಿಯಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಸಮಸ್ಯೆಗಳನ್ನು ಖುದ್ದು ಹಾಜರಾಗಿ ಬಗೆಹರಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ಲಿಖಿತವಾಗಿ ತಿಳಿಸಬೇಕು. ಮುಂದಿನ ಸಭೆಯ ವೇಳೆಗೆ ಈ ಸಮಸ್ಯೆಗಳು ಪುನರಾವರ್ತನೆ ಆಗಬಾರದು ಎಂದು ತಾಕೀತು ಮಾಡಿದರು.

‘ನಾಚಿಕೆ ಅನ್ನಿಸೋದಿಲ್ವಾ?’:ಜಿಲ್ಲೆಯ 407 ಪಡಿತರ ಕೇಂದ್ರಗಳ ಪೈಕಿ 257 ಕೇಂದ್ರಗಳು ಬಿಎಸ್ಎನ್ಎಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಖಾಸಗಿ ನೆಟ್‌ವರ್ಕ್ ಬಳಕೆದಾರರ ಸೇವೆಗಳನ್ನು ಬಳಸುತ್ತಿವೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅನಂತಕುಮಾರ ಹೆಗಡೆ, ‘ಸರ್ಕಾರಿ ಕಚೇರಿಗಳು ಖಾಸಗಿ ನೆಟ್‌ವರ್ಕ್ ಬಳಕೆ ಮಾಡುವುದು ನಾಚಿಕೆ ಅನ್ನಿಸೋದಿಲ್ವಾ?ಸರ್ಕಾರಿ ಸಂಸ್ಥೆಯ ವ್ಯವಸ್ಥೆಗಳನ್ನು ಬಳಸಿಕೊಂಡು ಖಾಸಗಿಯವರು ವ್ಯವಹಾರ ನಡೆಸುತ್ತಿದ್ದಾರೆ. ಈ ವಿಚಾರದಲ್ಲಿ ಬಿ.ಎಸ್.ಎನ್.ಎಲ್ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ. ಕೂಡಲೇ ಸೇವೆ ಉತ್ತಮಗೊಳ್ಳಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿ, ‘ಬಿ.ಎಸ್‍.ಎನ್‍.ಎಲ್‍.ನ ಅಧಿಕಾರಿಗಳು ಮತ್ತು ಸಿಬ್ಬಂದಿ ಜುಲೈ 15ರೊಳಗೆ ಸಮಸ್ಯೆಗಳನ್ನು ಬಗೆಹರಿಸಲು ಬದ್ಧರಾಗಿಬೇಕು. ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿಕೊಂಡು ಕೆಲಸ ಪೂರ್ಣಗೊಳಿಸಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.