ADVERTISEMENT

ಭಟ್ಕಳ | ತಲಗೋಡ ಗುಡ್ಡ ಕುಸಿತ: ಜನರಿಗೆ ಸಂಕಷ್ಟ

ಮಣ್ಣಿನ ರಾಶಿ ತೆರವು ವಿಳಂಬಕ್ಕೆ ಗ್ರಾಮಸ್ಥರ ಅಸಮಾಧಾನ

ಮೋಹನ ನಾಯ್ಕ
Published 5 ಆಗಸ್ಟ್ 2024, 4:56 IST
Last Updated 5 ಆಗಸ್ಟ್ 2024, 4:56 IST
ತಲಗೋಡಿನ ಗೊಂಡರಕೇರಿಯಲ್ಲಿ ಗುಡ್ಡಕುಸಿತವಾದ ರಸ್ತೆಯನ್ನು ತಾಲ್ಲೂಕಾಡಳಿತ ಸಂಚರಿಸದಂತೆ ಬ್ಯಾರಕೇಡ್ ಹಾಕಿ ನಿರ್ಬಂದಿಸಿರುವುದು
ತಲಗೋಡಿನ ಗೊಂಡರಕೇರಿಯಲ್ಲಿ ಗುಡ್ಡಕುಸಿತವಾದ ರಸ್ತೆಯನ್ನು ತಾಲ್ಲೂಕಾಡಳಿತ ಸಂಚರಿಸದಂತೆ ಬ್ಯಾರಕೇಡ್ ಹಾಕಿ ನಿರ್ಬಂದಿಸಿರುವುದು   

ಭಟ್ಕಳ: ಕಳೆದ 15 ದಿನಗಳ ಹಿಂದೆ ಸುರಿದ ಭಾರಿ ಮಳೆಗೆ ತಾಲ್ಲೂಕಿನ ತಲಗೋಡಿನ ಗೊಂಡರಕೇರಿ ರಸ್ತೆಗೆ ಕುಸಿದು ಬಿದ್ದಿರುವ ಗುಡ್ಡದ ಮಣ್ಣಿನ ರಾಶಿಯನ್ನು ತೆರವು ಮಾಡದೇ ಹಾಗೆಯೇ ಬಿಟ್ಟಿರುವ ಕಾರಣಕ್ಕೆ ಸ್ಥಳಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಲಗೋಡಿನ ಗೊಂಡರಕೇರಿಯಲ್ಲಿ ಅಂದಾಜು 30ಕ್ಕೂ ಹೆಚ್ಚೂ ಮನೆಗಳಿವೆ. ಅಂಕೋಲದಲ್ಲಿ ಶಿರೂರು ಗುಡ್ಡ ಕುಸಿದ ಸಮಯದಲ್ಲೇ ಈ ಗುಡ್ಡವು ಕುಸಿದಿತ್ತು. ಸ್ಥಳಿ ಪರಿಶೀಲಿಸಿದ್ದ ತಾಲ್ಲೂಕಾಡಳಿತವು ಗುಡ್ಡ ಕುಸಿತವಾದ ಸ್ಥಳದ ಸಮೀಪದಲ್ಲಿ ಬ್ಯಾರಿಕೇಡ್ ಅಳವಡಿಸಿ, ಈ ರಸ್ತೆಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ರಸ್ತೆಯಲ್ಲಿ ನಿರ್ಬಂಧಿಸಿತ್ತು.

‘ಭಟ್ಕಳ ಬಂದರಿನಿಂದ ತಲಗೋಡ ಗೊಂಡರಕೇರಿಗೆ ಸಂಪರ್ಕಿಸುವ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಸ್ಥಗಿತಗೊಳಿಸಿರುವ ಕಾರಣದಿಂದ ವಾಹನಗಳು ಸಾಗದೇ ಸ್ಥಳೀಯರು ನಿತ್ಯ ಕಾಲ್ನಡಿಗೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಬಂದರ ಶಾಲೆಗೆ ಹೋಗುವ ಚಿಕ್ಕಚಿಕ್ಕ ಮಕ್ಕಳು ಸೇರಿದಂತೆ ಬಂದರು ಹಾಗೂ ಮಾವಿನಕುರ್ವೆಗೆ ಕೆಲಸಕ್ಕೆ ತೆರಳುವವರು ಮಗ್ದುಂ ಕಾಲೊನಿ ಮಾರ್ಗವಾಗಿ ನಡೆದುಕೊಂದು ಬೆಳ್ನಿಯ ಮೂಲಕ ಬಂದರಿಗೆ ತಲುಪಬೇಕಾದ ಸ್ಥಿತಿ ಇದೆ. ಐದು ಕಿ.ಮೀ ಸುತ್ತು ಬಳಸಿ ಸಾಗಬೇಕಾಗುತ್ತಿರುವುದು ಸಮಸ್ಯೆಯಾಗಿದೆ’ ಎನ್ನುತ್ತಾರೆ ಸ್ಥಳೀಯರಾದ ಸುಕ್ರ ಗೊಂಡ.

ADVERTISEMENT

‘ಅಂದಾಜು 60 ರಿಂದ 70 ಅಡಿ ಎತ್ತರದಲ್ಲಿರುವ ಈ ಗುಡ್ಡದ ಕೆಳಗಿನ ಭಾಗದಲ್ಲಿ ಕುಸಿದಿದೆ. ಗುಡ್ಡದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಬಂಡೆಗಳಿವೆ. ಒಂದೊಮ್ಮೆ ಗುಡ್ಡ ಕುಸಿದು ಬಂಡೆಗಳು ಕೆಳಗಡೆ ಜಾರಿ ಬಂದರೆ ಭಾರಿ ಅವಘಡ ಸಂಭವಿಸಬಹುದು. ಈಗ ಗುಡ್ಡ ಕುಸಿದಿರುವ ರಸ್ತೆಯ ಕೆಳಭಾಗದ 10 ಮೀ. ದೂರದಲ್ಲಿ ಐದು ಮನೆಗಳಿದ್ದು, ಅಲ್ಲಿಯ ನಿವಾಸಿಗಳಿಗೆ ಈ ಗುಡ್ಡ ಅಪಾಯಕಾರಿಯಾಗಿದೆ’ ಎನ್ನುತ್ತಾರೆ ಸ್ಥಳೀಯ ಲೊಕೇಶ ನಾಯ್ಕ.

‘ತಲಗೋಡನಲ್ಲಿ ಗುಡ್ಡ ಕುಸಿತದ ಮಣ್ಣು ತೆರವು ಮಾಡಿ ತಡಗೋಡೆ ನಿರ್ಮಿಸಲು ಅಂದಾಜು ₹ 55 ಲಕ್ಷದ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಜಿಲ್ಲಾಧಿಕಾರಿ ಅವರಿಗೆ ಪ್ರಸ್ತಾವ ಕಳುಹಿಸಲಾಗಿದೆ. ರಸ್ತೆಯ ಕೆಳಭಾಗದ ಮನೆಗಳು ದೂರದಲ್ಲಿದ್ದು ಅವರಿಗೆ ಎಚ್ಚರದಿಂದ ಇರುವಂತೆ ಮುನ್ಸೂಚನೆ ನೀಡಲಾಗಿದೆ’ ಎಂದು ತಹಶೀಲ್ದಾರ್‌ ನಾಗರಾಜ ನಾಯ್ಕಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಲಗೋಡ ಗ್ರಾಮಸ್ಥರಿಗೆ ತಿರುಗಾಡಲು ಪರ್ಯಾಯ ಮಾರ್ಗದ ವ್ಯವಸ್ಥೆ ಇದ್ದು ಮಣ್ಣು ತೆರವು ಆಗುವ ತನಕ ಸಹಕರಿಸುವಂತೆ ಕೋರಲಾಗಿದೆ.

-ನಾಗರಾಜ ನಾಯ್ಕಡ ತಹಶೀಲ್ದಾರ್‌ ಭಟ್ಕಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.