ಕಾರವಾರ: 'ಮುಡಾ ಹಗರಣದಲ್ಲಿ ತನಿಖೆಗೆ ಒಳಪಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಸರಾ ಸಂದರ್ಭದಲ್ಲೇ ರಾಜೀನಾಮೆ ನೀಡಿ ತಮ್ಮ ಗೌರವ ಉಳಿಸಿಕೊಳ್ಳಲಿ' ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನವೀಕೃತ ಸಂಸದರ ಕಚೇರಿಯನ್ನು ಮಂಗಳವಾರ ಉದ್ಘಾಟಿಸಿದ ಬಳಿಕ ಅವರು ಮಾಧ್ಯಮದವರ ಜತೆ ಮಾತನಾಡಿದರು.
'ಅಧಿಕಾರದಲ್ಲಿ ಮುಂದುವರಿದರೆ ಅಧಿಕಾರಿಗಳಿಗೆ ತನಿಖೆ ನಡೆಸಲು ಮುಜುಗರ ಆಗಲಿದೆ. ತನಿಖೆ ಮೇಲೆ ಇದು ಒತ್ತಡ ಬೀರಲಿದೆ. ಸರಿಯಾಗಿ ತನಿಖೆಯಾಗಲು ಸಿದ್ದರಾಮಯ್ಯ ತಮ್ಮ ಹುದ್ದೆ ತೊರೆಯಬೇಕು' ಎಂದರು.
'ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ತನ್ನ ಸ್ಪಷ್ಟ ನಿಲುವು ತಿಳಿಸಬೇಕು. ವರದಿಯನ್ನು ಜನರಿಗೆ ತೊಂದರೆಯಾಗದಂತೆ ಜಾರಿಗೆ ತರುವ ನಿಟ್ಟಿನಲ್ಲಿ ಕೇಂದ್ರದ ಮಟ್ಟದಲ್ಲಿ ತಾನೂ ಸೇರಿದಂತೆ ರಾಜ್ಯದ ಸಂಸದರು ಪ್ರಯತ್ನಿಸುತ್ತೇವೆ' ಎಂದರು.
'ಸಂಸದರ ಕಚೇರಿ ಜನಸ್ನೇಹಿಯಾಗಿ ಇರಲಿದೆ. ಕ್ಷೇತ್ರದ ಜನರು ಯಾವುದೇ ಸಮಯದಲ್ಲಿಯೂ ತಮ್ಮ ಅಹವಾಲುಗಳನ್ನು ಕಚೇರಿಗೆ ಸಲ್ಲಿಸಬಹುದು. ಸಂಸದರ ಕೆಲಸದ ಬಗ್ಗೆ ಮಾಹಿತಿಯನ್ನೂ ಪಡೆಯಬಹುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.