ADVERTISEMENT

ರೈತರೆ ಬ್ಯಾಂಕಿನ ಜೀವಾಳ: ಶಾಸಕ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 12:24 IST
Last Updated 9 ಜುಲೈ 2024, 12:24 IST
ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ಕೆಡಿಸಿಸಿ ಬ್ಯಾಂಕಿನ ನೂತನ ಶಾಖೆಯನ್ನು ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ಉದ್ಘಾಟಿಸಿದರು
ಮುಂಡಗೋಡ ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ಕೆಡಿಸಿಸಿ ಬ್ಯಾಂಕಿನ ನೂತನ ಶಾಖೆಯನ್ನು ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ಉದ್ಘಾಟಿಸಿದರು   

ಮುಂಡಗೋಡ: ಆಗಸ್ಟ್ ತಿಂಗಳ ಅಂತ್ಯದೊಳಗೆ ಜಿಲ್ಲೆಯಲ್ಲಿ ಕೆಡಿಸಿಸಿ ಬ್ಯಾಂಕಿನ 73 ಶಾಖೆಗಳನ್ನು ತೆರೆಯುವ ಮೂಲಕ, ರಾಜ್ಯದಲ್ಲಿಯೇ ಎರಡನೇ ಬ್ಯಾಂಕ್ ಎಂಬ ಹೆಸರು ಪಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ಕೆಡಿಸಿಸಿ ಬ್ಯಾಂಕಿನ ನೂತನ‌ ಶಾಖೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯ ರೈತರೆ ಬ್ಯಾಂಕಿನ ಜೀವಾಳ ಆಗಿದ್ದಾರೆ. ಕೆಡಿಸಿಸಿ ಬ್ಯಾಂಕಿಗೆ 105 ವರ್ಷದ ಇತಿಹಾಸ ಇದ್ದು, ತಾಲ್ಲೂಕಿನ ಒಂಬತ್ತು ಸಾವಿರ ರೈತರು ಮುಂಡಗೋಡ ಶಾಖೆಗೆ ತೆರಳಿ ಬೆಳಿಗ್ಗೆಯಿಂದ ಸರತಿಯಲ್ಲಿ ನಿಂತು ಸಾಲ ಪಡೆಯಬೇಕಾಗಿತ್ತು. ನೂತನ ಶಾಖೆಗಳ ಆರಂಭದಿಂದ ರೈತರ ಸಮಸ್ಯೆ ದೂರವಾಗಲಿದೆ ಎಂದರು.

ADVERTISEMENT

ರೈತರ ಹಿತದೃಷ್ಟಿಯಿಂದ ತಾಲ್ಲೂಕಿನ ಇಂದೂರ ಮತ್ತು ಪಾಳಾ ಗ್ರಾಮದಲ್ಲಿ ನೂತನ ಶಾಖೆಗಳನ್ನು ತೆರೆಯಲಾಗಿದೆ. ಇದರಿಂದ ಅಕ್ಕಪಕ್ಕದ ನಾಲ್ಕು ಪಂಚಾಯಿತಿ ವ್ಯಾಪ್ತಿಯ ರೈತರು ಈ ಶಾಖೆಗಳಲ್ಲಿ ಸಾಲ ಪಡೆಯಬಹುದಾಗಿದೆ. ರೈತರೂ ತಮ್ಮ ಠೇವಣಿಯನ್ನು ಕೆಡಿಸಿಸಿ ಬ್ಯಾಂಕಿನಲ್ಲಿಯೇ ಇಟ್ಟು ಸಾಲಗಳನ್ನು ಪಡೆಯುವಂತಾಗಬೇಕು ಎಂದು ಹೇಳಿದರು.

ಮಾಜಿ ಶಾಸಕ ವಿ.ಎಸ್.ಪಾಟೀಲ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನ ನಾಯ್ಕ, ನಿರ್ದೇಶಕರಾದ ಎಲ್.ಟಿ ಪಾಟೀಲ, ಪ್ರಮೋದ ಡವಳೆ,ಇಂದೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಪರವಾಪುರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಬ್ಯಾಂಕಿನ ಎಂ.ಡಿ ಶ್ರೀಕಾಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.