ADVERTISEMENT

ಮುಂಡಗೋಡ | ಗಾಳಿ–ಮಳೆ: ನೆಲಕ್ಕೊರಗಿದ ಭತ್ತ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 12:51 IST
Last Updated 17 ಅಕ್ಟೋಬರ್ 2024, 12:51 IST
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ವ್ಯಾಪ್ತಿಯ ಗದ್ದೆಯಲ್ಲಿ ಬಿರುಸಿನ ಗಾಳಿ–ಮಳೆಗೆ ಭತ್ತ ನೆಲಕ್ಕೊರಗಿದೆ
ಮುಂಡಗೋಡ ತಾಲ್ಲೂಕಿನ ಚವಡಳ್ಳಿ ವ್ಯಾಪ್ತಿಯ ಗದ್ದೆಯಲ್ಲಿ ಬಿರುಸಿನ ಗಾಳಿ–ಮಳೆಗೆ ಭತ್ತ ನೆಲಕ್ಕೊರಗಿದೆ   

ಮುಂಡಗೋಡ: ತಾಲ್ಲೂಕಿನಲ್ಲಿ ಬುಧವಾರ ಮಧ್ಯರಾತ್ರಿ ಆರಮಭವಾದ ಮಳೆ ಗುರುವಾರವೂ ಮುಂದುವರಿಯಿತು. ಗುಡುಗು, ಸಿಡಿಲಿನ ಆರ್ಭಟ ಜೋರಾಗಿತ್ತು. ಕೆರೆ–ಕಟ್ಟೆ, ಗದ್ದೆಗಳಲ್ಲಿ ನೀರು ನಿಂತಿದ್ದು, ಕೆರೆಗಳು ಕೋಡಿ  ಹರಿದಿದ್ದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು.

ಗಾಳಿ–ಮಳೆಗೆ ಕಾಳು ಬಿಟ್ಟು ಕೊಯ್ಲು ಹಂತದಲ್ಲಿರುವ ಭತ್ತದ ಪೈರು ನೆಲಕ್ಕುರುಳಿದೆ. ನಿರಂತರ ಮಳೆಯಿಂದ ಗೋವಿನಜೋಳಕ್ಕೂ ಹಾನಿಯುಂಟಾಗಿದೆ. ಇನ್ನೂ ಮಳೆಯಾದರೆ, ಕಾಳುಗಳು ಕೊಳೆತು ಫಸಲು ಕೈಸೇರದ ಆತಂಕ ರೈತರಲ್ಲಿದೆ.  ಬೆಳೆ ರಕ್ಷಿಸಿಕೊಳ್ಳಲು ಹರಸಾಹಸಪಡುವಂತಾಗಿದೆ.

‘ತಾಲ್ಲೂಕಿನಲ್ಲಿ ಸುಮಾರು 7,500 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ನಾಟಿ ಭತ್ತದ ಕಾಳು ಗಟ್ಟಿಯಾಗಿ, ತೆನೆ ಕಟ್ಟುವ ಹಂತದಲ್ಲಿದೆ. ಭತ್ತದ ಇಳುವರಿ ಮೇಲೆ ಮಳೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಭತ್ತದ ತೆನೆಗಳು ಸಾಲುಸಾಲಾಗಿ ನೆಲಕ್ಕೆ ಒರಗಿ, ಕಾಳುಗಳು ಉದುರುತ್ತಿವೆ. ಕೆಲವೆಡೆ ನೀರಿನಲ್ಲಿ ಕಾಳು ಮುಳುಗಿ ಕೊಳೆಯುತ್ತಿದೆ. ಬಿಸಿಲು ಬಂದು ಗದ್ದೆ ಒಣಗಿದರೆ ಮಾತ್ರ, ಒಂದಿಷ್ಟು ಫಸಲು ಸಿಗಲಿದೆ’ ಎಂದು ರೈತ ಪರುಶುರಾಮ ರಾಣಿಗೇರ ಹೇಳಿದರು.

ADVERTISEMENT

‘ಈ ವರ್ಷ ಉತ್ತಮ ಮಳೆಯಾಗಿದೆ. ಆದರೆ, ರೈತರ ಅನುಕೂಲವಾಗದೆ, ಬೆಳೆ ಹಾನಿ ಉಂಟಾಗಿದೆ. ಗೋವಿನಜೋಳ ಕೈಕೊಟ್ಟಿದ್ದು, ಭತ್ತದ ಗಟ್ಟಿ ಕಾಳಿನ ಪ್ರಮಾಣ ಕಡಿಮೆಯಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.