ಮುಂಡಗೋಡ: ಮೈದುಂಬಿರುವ ಜಲಾಶಯದ ಸೊಬಗು ಇಮ್ಮಡಿಗೊಳಿಸಬೇಕಿದ್ದ ಉದ್ಯಾನ, ಅಸಮರ್ಪಕ ನಿರ್ವಹಣೆ ಹಾಗೂ ಇಚ್ಛಾಶಕ್ತಿಯ ಕೊರತೆಯಿಂದ ಸೊರಗಿದೆ. ಪ್ರಕೃತಿ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಪಾಳುಬಿದ್ದ ಉದ್ಯಾನ ನಿರಾಸೆಗೊಳಿಸುತ್ತಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ, ಒಂದೂವರೆ ದಶಕದ ಹಿಂದೆ ಅಭಿವೃದ್ಧಿಗೊಳಿಸಿದ ತಾಲ್ಲೂಕಿನ ಸನವಳ್ಳಿ ಜಲಾಶಯದ ದಡದಲ್ಲಿರುವ ಉದ್ಯಾನ ಈಗ ಅಕ್ಷರಶಃ ಅನಾಥವಾಗಿದೆ.
ವರ್ಷದಿಂದ ವರ್ಷಕ್ಕೆ ನಿರ್ವಹಣೆ ಇಲ್ಲದೇ ಉದ್ಯಾನ ಕಳೆಗುಂದುತ್ತಿದೆ. ಆಲಂಕಾರಿಕ ಹೂವಿನ ಗಿಡಗಳು, ಔಷಧೀಯ ಸಸ್ಯಗಳು, ವಿವಿಧ ಪ್ರಬೇಧದ ಸಸ್ಯಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡು, ಜನರನ್ನು ಕೈಬೀಸಿ ಕರೆಯುತ್ತಿದ್ದ ಉದ್ಯಾನದ ವೈಭವ ಮರುಕಳಿಸಬೇಕಿದೆ.
ಗಿಡಗಂಟಿಗಳು, ತುಕ್ಕು ಹಿಡಿದ ಆಟದ ಪರಿಕರಗಳು, ಪೆಡಲ್ ದೋಣಿಗಳು ಇಲ್ಲಿನ ದುಸ್ಥಿತಿಗೆ ಕನ್ನಡಿ ಹಿಡಿದಿವೆ. ತುಕ್ಕು ಹಿಡಿದ ಪ್ರವೇಶ ದ್ವಾರವೇ ಜನರನ್ನು ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ಕಳಿಸುತ್ತಿದೆ. ಕಾಂಕ್ರೀಟ್ ನಾಡಿನಿಂದ ಬೇಸತ್ತು, ಪ್ರಕೃತಿ ಮಡಿಲಲ್ಲಿ ಕೆಲ ಸಮಯ ಕಳೆಯಬೇಕೆಂದು ಬಯಸಿ ಬರುವವರಿಗೆ ಇಲ್ಲಿ ಇನ್ನಷ್ಟು ಬೇಸರವಾಗುವುದಂತೂ ನಿಜ.
‘ಅರಣ್ಯ ಇಲಾಖೆ ಹಾಗೂ ಗ್ರಾಮ ಅರಣ್ಯ ಸಮಿತಿ ಸಹಯೋಗದಲ್ಲಿ 15 ವರ್ಷಗಳ ಹಿಂದೆ ಸನವಳ್ಳಿ ದೋಣಿ ವಿಹಾರ ಕೇಂದ್ರ ಲೋಕಾರ್ಪಣೆ ಮಾಡಲಾಗಿತ್ತು. ಆರಂಭದಲ್ಲಿ ಪೆಡಲ್ ದೋಣಿಗಳ ಮೂಲಕ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಜಲಾಶಯದ ಸುತ್ತಲಿನ ಸೊಬಗನ್ನು ತೋರಿಸಲಾಗುತ್ತಿತ್ತು. ವರ್ಷಗಳು ಕಳೆದಂತೆ ದೋಣಿಗಳು ದಡ ಸೇರಿದವು’ ಎಂಧು ಸಾಮಾಜಿಕ ಕಾರ್ಯಕರ್ತ ರಾಜು ಗುಬ್ಬಕ್ಕನವರ ವಿಷಾದದಿಂದ ಹೇಳುತ್ತಾರೆ.
‘ಉದ್ಯಾನದಲ್ಲಿ ಜನರು ಕುಟುಂಬ ಸಮೇತ ಬಂದು ಖುಷಿ ಪಡುತ್ತಿದ್ದರು. ದಿನ ಕಳೆದಂತೆ ಆಟದ ಪರಿಕರಗಳೂ ತುಕ್ಕು ಹಿಡಿದು ಮಕ್ಕಳಿಂದ ದೂರವಾಗಿವೆ. ಕಾಂಕ್ರೀಟ್ ಆಸನಗಳೂ ಬಣ್ಣಗಳನ್ನು ಕಳೆದುಕೊಂಡು ಅಲ್ಲಲ್ಲಿ ಬಿರುಕುಬಿಟ್ಟಿವೆ’ ಎಂದರು.
‘ಮುಂಡಗೋಡದಿಂದ 5 ಕಿ.ಮೀ. ಅಂತರದಲ್ಲಿ ಬಂಕಾಪುರಕ್ಕೆ ಹೋಗುವ ರಾಜ್ಯ ಹೆದ್ದಾರಿ ಸಮೀಪದಲ್ಲಿ ಉದ್ಯಾನವಿದೆ. ವಾರಾಂತ್ಯದ ದಿನಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಜಲಾಶಯವನ್ನು ನೋಡಲು ಕೆಲ ಹೊತ್ತು ನಿಲ್ಲುತ್ತಾರೆ. ಉದ್ಯಾನದ ಅವ್ಯವಸ್ಥೆ ಕಂಡು ಬೇಸರದಿಂದ ತೆರಳುತ್ತಾರೆ’ ಎನ್ನುತ್ತಾರೆ ಗ್ರಾಮ ಅರಣ್ಯ ಸಮಿತಿ ಸದಸ್ಯ ಸಂಪತ್.
‘ಪ್ರವಾಸೋದ್ಯಮ ದೃಷ್ಟಿಯಿಂದ ಉದ್ಯಾನ ಅಭಿವೃದ್ಧಿಪಡಿಸಿದರೆ ಇಲಾಖೆಗೆ ಆದಾಯ ಬರುತ್ತದೆ. ಪ್ರವಾಸಿಗರಿಗೂ ಅನುಕೂಲವಾಗುತ್ತದೆ. ನಿಸರ್ಗದ ಮಡಿಲಲ್ಲಿ ಇರುವ ಉದ್ಯಾನಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ಶಕ್ತಿ ಇರುತ್ತದೆ. ಆದರೆ, ಅದನ್ನು ಸಾಕಾರಗೊಳಿಸುವ ಇಚ್ಛಾಶಕ್ತಿ ಸಂಬಂಧಿಸಿದವರಿಗೆ ಬರಬೇಕಿದೆ’ ಎಂದು ಹೇಳಿದರು.
‘ಅಭಿವೃದ್ಧಿ ವರದಿ ತಯಾರಿ’
‘ಸನವಳ್ಳಿ ಜಲಾಶಯದ ದೋಣಿ ವಿಹಾರ ಕೇಂದ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವರದಿ ತಯಾರಿಸಲಾಗಿದ್ದು ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ದೋಣಿ ವಿಹಾರ ಹಾಗೂ ಉದ್ಯಾನವು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಲು ಹಾಗೂ ಇರುವ ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು’ ಎಂದು ವಲಯ ಅರಣ್ಯ ಅಧಿಕಾರಿ ವಾಗೀಶ ಬಿ.ಜೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.