ADVERTISEMENT

ಮುಂಡಗೋಡ: ಕೋಡಿ ಬಿದ್ದ ಧರ್ಮಾ ಜಲಾಶಯ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 14:09 IST
Last Updated 20 ಜುಲೈ 2024, 14:09 IST
ಮುಂಡಗೋಡ ತಾಲ್ಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯ ಶನಿವಾರ ಭರ್ತಿಯಾಗಿ ಕೋಡಿ ಬಿದ್ದು ಹಾನಗಲ್‌ ತಾಲ್ಲೂಕಿನ ಕೆರೆಕಟ್ಟೆಗಳಿಗೆ ಹರಿಯುತ್ತಿದೆ
ಮುಂಡಗೋಡ ತಾಲ್ಲೂಕಿನ ಮಳಗಿ ಸಮೀಪದ ಧರ್ಮಾ ಜಲಾಶಯ ಶನಿವಾರ ಭರ್ತಿಯಾಗಿ ಕೋಡಿ ಬಿದ್ದು ಹಾನಗಲ್‌ ತಾಲ್ಲೂಕಿನ ಕೆರೆಕಟ್ಟೆಗಳಿಗೆ ಹರಿಯುತ್ತಿದೆ   

ಮುಂಡಗೋಡ: ತಾಲ್ಲೂಕಿನ ಮಳಗಿ ಸನಿಹದ ಧರ್ಮಾ ಜಲಾಶಯ ಶನಿವಾರ ಕೋಡಿ ಬಿದ್ದಿದೆ. ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳಿನಲ್ಲಿಯೇ, ಕೋಡಿ ಬಿದ್ದ ಮೊದಲ ಜಲಾಶಯ ಇದಾಗಿದೆ. ಮೂರು ತಾಲ್ಲೂಕುಗಳೊಂದಿಗೆ ಜಲಾನಯನ ಪ್ರದೇಶ ಹಂಚಿಕೊಂಡಿರುವ, ಧರ್ಮಾ ಜಲಾಶಯ ಮೈದುಂಬಿಕೊಂಡಿರುವುದನ್ನು ಸ್ಥಳೀಯರು ತಂಡೋಪತಂಡವಾಗಿ ಬಂದು ಕಣ್ತುಂಬಿಕೊಳ್ಳುತ್ತಿದ್ದಾರೆ.

ಶಿರಸಿ ತಾಲ್ಲೂಕಿನ ಇಸಳೂರ, ಬಂಕನಾಳ, ಎಕ್ಕಂಬಿ, ಬೀಳೂರ, ಮುಂಡಗೋಡ ತಾಲ್ಲೂಕಿನ ಕಾಳೇಬೈಲ್‌, ತೊಗರಳ್ಳಿ, ಬೆಡಸಗಾಂವ್, ಮಳಗಿ ಭಾಗದಲ್ಲಿ ಬೀಳುವ ಮಳೆಯ ನೀರು ಈ ಜಲಾಶಯಕ್ಕೆ ಹರಿದು ಬರುತ್ತದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಬಿರುಸಿನ ಮಳೆ ಆಗುತ್ತಿರುವುದರಿಂದ, ಧರ್ಮಾ ಜಲಾಶಯ ಭರ್ತಿ ಆಗಿದೆ. ಕೋಡಿ ಬಿದ್ದ ನೀರು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಕೆರೆಕಟ್ಟೆಗಳು ಹಾಗೂ ಗದ್ದೆಗಳಿಗೆ ಹರಿಯುತ್ತದೆ. ಹೀಗಾಗಿ ಈ ಜಲಾಶಯವು ಹಾನಗಲ್‌ ತಾಲ್ಲೂಕಿನ ರೈತರ ಜೀವನಾಡಿ ಆಗಿದೆ.

ವಾರಾಂತ್ಯದ ದಿನಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಕೋಡಿ ನೀರು ಹರಿಯುವುದನ್ನು ಕಣ್ತುಂಬಿಕೊಳ್ಳುತ್ತಾರೆ ಎಂದು ಸ್ಥಳೀಯ ನಿವಾಸಿ ವಿನಯ ಪಾಟೀಲ ಹೇಳಿದರು.

ADVERTISEMENT

ಶುಕ್ರವಾರ ಸಂಜೆ ನೋಡಿದಾಗ ಇನ್ನೂ 2 ಅಡಿಯಷ್ಟು ನೀರು ಕೋಡಿ ಬೀಳಲು ಕಡಿಮೆ ಇತ್ತು. ಆದರೆ, ಶನಿವಾರ ಮಧ್ಯಾಹ್ನದ ವೇಳೆಗೆ ಧರ್ಮಾ ಮೈದುಂಬಿಕೊಂಡು ಕೋಡಿ ಬಿದ್ದು, ಹರಿಯುತ್ತಿದೆ. ಸುತ್ತಲಿನ ರೈತರು ಕೋಡಿ ನೀರನ್ನು ಕಂಡು ಸಂತಸಗೊಂಡಿದ್ದಾರೆ. ಯುವಕರು ಮೊಬೈಲ್‌ನಲ್ಲಿ ಸೆರೆ ಹಿಡಿದು, ಧರ್ಮಾ ಸೊಬಗನ್ನು ಇತರರಿಗೆ ಹಂಚುತ್ತಿದ್ದಾರೆʼ ಎಂದು ಸ್ಥಳೀಯರಾದ ಶರಣ ಗೊಟಗೋಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.