ADVERTISEMENT

ಮುಂಡಗೋಡ: ಮೊರಾರ್ಜಿ ವಸತಿ ಶಾಲೆಗೆ ಶಾಸಕ ಶಿವರಾಮ ಹೆಬ್ಬಾರ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 10:50 IST
Last Updated 2 ಜನವರಿ 2024, 10:50 IST
<div class="paragraphs"><p>ಶಿವರಾಮ ಹೆಬ್ಬಾರ </p></div>

ಶಿವರಾಮ ಹೆಬ್ಬಾರ

   

ಮುಂಡಗೋಡ: ಸಮಾಜದ ಕಟ್ಟ ಕಡೆಯ ಬಡವರ ಮಕ್ಕಳು ಕಲಿಯುವಂತ ಜಾಗವಿದು. ಹೊಟ್ಟೆ ತುಂಬುವಷ್ಟು ಆಹಾರ ಸಿಗುತ್ತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿದರೆ, ಯಾವ ಕಾರಣಕ್ಕೂ ಒಪ್ಪಲು ಆಗದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಅವ್ಯವಸ್ಥೆಯ ಬಗ್ಗೆ ವ್ಯಾಪಕ ದೂರು ಕೇಳಿಬಂದಿರುವ ತಾಲ್ಲೂಕಿನ ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯ ಬಗ್ಗೆ ಖಾರವಾಗಿ ಮಾತನಾಡಿದರು.

ADVERTISEMENT

ಮಕ್ಕಳ ಬಗ್ಗೆ ಪ್ರಾಚಾರ್ಯರು ವಿಶೇಷ ಕಾಳಜಿ ವಹಿಸಬೇಕು. ಏನೇ ಕೆಟ್ಟ ಪರಿಸ್ಥಿತಿ ನಿರ್ಮಾಣ ಆದರೂ, ಅದಕ್ಕೆ ಪ್ರಾಚಾರ್ಯರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ನಮ್ಮದೇ ಮಕ್ಕಳು ಇಂತಹ ಜಾಗದಲ್ಲಿ ಕಲಿಯುತ್ತಿದ್ದರೇ ಸುಮ್ಮನೇ ಇರಲು ಆಗುತ್ತಿತ್ತೇ ಎಂದು ಪ್ರಶ್ನಿಸಿದ ಶಾಸಕರು, ವಸತಿ ನಿಲಯದ ಶೌಚಾಲಯದ ಸಮಸ್ಯೆ ಗಂಭೀರವಾಗಿದೆ. ಇನ್ನೂ ಹದಿನೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು. ಈ ವಸತಿ ಶಾಲೆಗೆ ಏನೆಲ್ಲ ಸೌಲಭ್ಯಗಳ ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಿ ನೀಡುವಂತೆ ತಹಶೀಲ್ದಾರ್ ರಿಗೆ ಸೂಚಿಸಿದ್ದೇನೆ. ಅಲ್ಲದೇ ನೂತನ ಕಾಲೇಜು ಕಟ್ಟಡ ಹಾಗೂ ವಸತಿ ನಿಲಯವನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು. ಇದರಿಂದ ತಕ್ಕ ಮಟ್ಟಿಗೆ ಸಮಸ್ಯೆ ಬಗೆಹರಿಯಲಿದೆ ಎಂದರು.

'ಬಡವರ ಮಕ್ಕಳು ಬದುಕಬೇಕಾದಂತ ಜಾಗವಿದು. ಅಂತಹ ಮಕ್ಕಳ ಹೊಟ್ಟೆಗೆ ಕಡಿಮೆಯಾಯಿತು ಎಂಬ ಪರಿಸ್ಥಿತಿ ಬರಲೇಬಾರದು. ಒಣಗಿದ ತರಕಾರಿ ಬಳಸಿದರೆ ಸಹಿಸಲು ಆಗುವುದಿಲ್ಲ ಎಂದು ಪ್ರಾಚಾರ್ಯರಿಗೆ ಖಡಕ್ ಆಗಿ ಹೇಳಿದರು.

ಮಧ್ಯಾಹ್ನಕ್ಕೆ ತಯಾರು ಮಾಡಲಾಗಿದ್ದ ಅಡುಗೆಯನ್ನು ಶಾಸಕ ಹೆಬ್ಬಾರ್ ಪರಿಶೀಲಿಸಿದರು. ಮೆನು ಪ್ರಕಾರ ಅಡುಗೆ ಮಾಡಲಾಗಿದೆಯೇ ಎಂದು ಮೆನು ಪಟ್ಟಿಯನ್ನು ವೀಕ್ಷಿಸಿದರು. ವಿದ್ಯಾರ್ಥಿಗಳನ್ನು ಮಾತನಾಡಿಸಿ, ಊಟದ ರುಚಿಯ ಬಗ್ಗೆ ಮಾಹಿತಿ ಪಡೆದುಕೊಂಡರು.

ತಹಶೀಲ್ದಾರ್ ಶಂಕರ ಗೌಡಿ, ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.