ಮುಂಡಗೋಡ: ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಎಂಟು ಗಂಟೆಗಳಲ್ಲಿ ಎಂಟು ಹೆರಿಗೆಯಾಗಿದ್ದು, ತಾಯಂದಿರು ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ. ಲಿಂಗಾನುಪಾತದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂಬ ಆತಂಕದ ನಡುವೆಯೇ, ಜನಿಸಿದ ಒಟ್ಟು ಎಂಟು ಶಿಶುಗಳಲ್ಲಿ 6 ಶಿಶುಗಳು ಹೆಣ್ಣುಮಕ್ಕಳಾಗಿರುವುದು ವಿಶೇಷ.
ಕೇವಲ ಎಂಟು ಗಂಟೆಗಳ ಅಂತರದಲ್ಲಿ ಎಂಟು ಹೆರಿಗೆ ಆಗಿರುವುದು ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಈಚಿನ ದಿನಗಳಲ್ಲಿ ಇದೇ ಮೊದಲು ಎನ್ನಲಾಗಿದೆ. ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 50-60 ಹೆರಿಗೆಗಳು ಆಗುತ್ತವೆ. ಮುಂಡಗೋಡ ತಾಲ್ಲೂಕು ಅಷ್ಟೇ ಅಲ್ಲದೆ ಪಕ್ಕದ ತಾಲ್ಲೂಕಿನ ಗರ್ಭಿಣಿಯರೂ ಇಲ್ಲಿನ ತಾಲ್ಲೂಕು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳುತ್ತಾರೆ.
‘ಜ. 22ರಂದು ಮಧ್ಯಾಹ್ನ 1ರಿಂದ ರಾತ್ರಿ 9ರವರೆಗೆ ಒಟ್ಟು ಎಂಟು ಹೆರಿಗೆಗಳಾಗಿವೆ. ಅದರಲ್ಲಿ 2 ಗಂಡು ಹಾಗೂ 6 ಹೆಣ್ಣು ಶಿಶುಗಳು ಜನಿಸಿವೆ. ನಾಲ್ಕು ಗರ್ಭಿಣಿಯರಿಗೆ ಸಿಜೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದ್ದು, ಉಳಿದವು ಸಾಮಾನ್ಯ ಹೆರಿಗೆಗಳು. ಎಲ್ಲರೂ ಆರೋಗ್ಯದಿಂದ ಇದ್ದಾರೆʼ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ ತಿಳಿಸಿದರು.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ಶಿವಕುಮಾರ, ಅರಿವಳಿಕೆ ತಜ್ಞ ಡಾ.ಭರತ್ ತಂತ್ರಿ, ಸಿಬ್ಬಂದಿ ನಾಗರತ್ನ, ಜಯಶ್ರೀ, ಮಹಾಲಕ್ಷ್ಮಿ, ಸಂಗೀತಾ, ದೇವಕಿ, ವಿದ್ಯಾಶ್ರೀ, ಪ್ರಭಾ, ಶಾರದಾ ಹಾಗೂ ರೇಣುಕಾ ಇವರ ಕಾರ್ಯಕ್ಕೆ ವೈದ್ಯಾಧಿಕಾರಿ ಪ್ರಶಂಸಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.