ಭಟ್ಕಳ: ಕೊರೊನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ತಾಲ್ಲೂಕಿನ ಮುರ್ಡೇಶ್ವರದಲ್ಲಿ ಭಕ್ತರಿಗೆ ದೇವರ ದರ್ಶನವನ್ನು ಮಾರ್ಚ್ 21ರಿಂದಸ್ಥಗಿತಗೊಳಿಸಲಾಗುತ್ತಿದೆ.
ದೇವಸ್ಥಾನದ ಮೊಕ್ತೇಸರ ಶ್ರೀಪಾದ ಕಾಮತ್ ಹಾಗೂ ಇತರರು, ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಪ್ರಧಾನ ವ್ಯವಸ್ಥಾಪಕ ಜಯರಾಮ ಅಡಿ ಅವರನ್ನು ಒಳಗೊಂಡ ಸಮಿತಿಯು ಶುಕ್ರವಾರ ಸಭೆ ಸೇರಿತು. ಸರ್ಕಾರದ ಆದೇಶವನ್ನು ಪಾಲಿಸಲು ತೀರ್ಮಾನಿಸಲಾಯಿತು.
ಒಂದು ವಾರದಿಂದ ಕೊರೊನಾ ಭೀತಿ ಮುರ್ಡೇಶ್ವರವನ್ನೂ ಆವರಿಸಿಕೊಂಡಿದ್ದು, ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಶುಕ್ರವಾರ ಸುಮಾರು200 ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ, ಸೇವೆ ಸಲ್ಲಿಸಿ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿದ್ದರು.ಆದರೆ, ಶನಿವಾರದಿಂದ ಸರ್ಕಾರದ ಮುಂದಿನ ಆದೇಶದವರೆಗೆ ದೇವರ ದರ್ಶನ ಹಾಗೂ ಯಾವುದೇ ಸೇವೆಗಳಿಗೆ ಭಕ್ತರಿಗೆ ಅವಕಾಶ ಇರುವುದಿಲ್ಲ.
‘ದೇವರಿಗೆಪ್ರತಿನಿತ್ಯವೂ ಮಾಡುವತ್ರಿಕಾಲ ಪೂಜೆ, ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ ಬಲಿ ಹಾಗೂ ಪೂಜೆಗಳನ್ನು ಎಂದಿನಂತೆ ದೇವಸ್ಥಾನದ ವೈದಿಕ ವೃಂದದವರು ನಡೆಸಲಿದ್ದಾರೆ.ಇದು ಎಷ್ಟು ದಿನ ಮುಂದುವರಿಯುತ್ತದೋ ಹೇಳಲಾಗುವುದಿಲ್ಲ’ ಎಂದು ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ ತಿಳಿಸಿದರು.
ಸಮುದ್ರ ತೀರಖಾಲಿ:ಶಾಲೆ ಕಾಲೇಜು ಕಚೇರಿಗಳಿಗೆ ಸಾಲು ಸಾಲು ರಜೆ ಬಂದರೆ ಸಾಕು, ಸುಂದರ ಕಡಲತೀರ ಮುರ್ಡೇಶ್ವರದಸಮುದ್ರ ತೀರದಲ್ಲಿ ಏನಿಲ್ಲವೆಂದರೂ 30 ಸಾವಿರ ಪ್ರವಾಸಿಗರು ಇರುತ್ತಿದ್ದರು. ಪ್ರವಾಸಿಗರ ವಾಹನಗಳೂಸಾಲುಗಟ್ಟಿ ನಿಲ್ಲುತ್ತಿದ್ದವು. ಇಲ್ಲಿನವಸತಿಗೃಹಗಳೆಲ್ಲಾ ತುಂಬಿರುತ್ತಿದ್ದವು. ಕೆಲವೊಮ್ಮೆ ಪ್ರವಾಸಿಗರು ಸಮುದ್ರ ತೀರ, ರಸ್ತೆಗಳ ಅಕ್ಕಪಕ್ಕದಲ್ಲಿ ಮಲಗಿಕೊಂಡು, ನಾಯಿಗಳಿಂದ ಕಚ್ಚಿಸಿಕೊಂಡು ಬೆಳಕು ಹರಿಸಿದ್ದ ಉದಾಹರಣೆಗಳೂ ಇವೆ. ಆದರೆ, ಕೊರೊನಾ ವೈರಸ್ ಸೋಂಕು ಹರಡುವಿಕೆಯ ಭೀತಿ ಇವೆಲ್ಲಕ್ಕೂ ತಡೆಯೊಡ್ಡಿದೆ.
ಈಗಸಮುದ್ರ ತೀರ ಭಣಗುಡುತ್ತಿದೆ. ವಸತಿಗೃಹಗಳೆಲ್ಲಾ ಖಾಲಿ ಹೊಡೆಯುತ್ತಿವೆ. ಹೋಟೆಲ್, ಅಂಗಡಿಗಳು ತೆರೆದಿದ್ದರೂ ಪ್ರವಾಸಿಗರೇ ಇಲ್ಲದೇ ಮಾಡಿದ ತಿಂಡಿಯೆಲ್ಲಾ ಒಣಗುತ್ತಿವೆ. ಒಟ್ಟಿನಲ್ಲಿ ಪ್ರವಾಸಿಗರಿಂದ ಸದಾ ಗಿಜಿಗುಡುತ್ತಿದ್ದ ವಿಶ್ವವಿಖ್ಯಾತ ಪ್ರವಾಸಿ ಕೇಂದ್ರ ಮುರ್ಡೇಶ್ವರ, ಈಗ ಸ್ತಬ್ಧಗೊಂಡಿದೆ ಎಂದು ಸ್ಥಳೀಯರಾದ ಈಶ್ವರ ದೊಡ್ಮನೆ ಹೇಳಿದರು.
ಪೊಲೀಸ್ ಬ್ಯಾರಿಕೇಡ್:ಮುರ್ಡೇಶ್ವರಕ್ಕೆ ಹೊರಗಿನಿಂದ ಮೋಜು ಮಸ್ತಿಗಾಗಿ ಪ್ರವಾಸಿಗರು ಬರುವುದನ್ನುಪೊಲೀಸ್ ಇಲಾಖೆಯು ನಿರ್ಬಂಧಿಸಿದೆ. ಬ್ಯಾರಿಕೇಡ್ ನಿರ್ಮಿಸಿ ಒಳಗೆ ಪ್ರವೇಶಿಸದಂತೆ ತಡೆಯುತ್ತಿದೆ. ಅನಿವಾರ್ಯ ಕಾರಣಗಳಿಂದ ಹೋಗಲೇ ಬೇಕಾದವರನ್ನು ಮಾತ್ರ ಅವರ ಸಂಪೂರ್ಣ ಮಾಹಿತಿ ಪಡೆದುಕೊಂಡು ಬಿಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.