ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಗಾಲ್ಫ್ ಮೈದಾನದಲ್ಲಿ ನ.21ರಿಂದ 23ರವರೆಗೆ ರಾಜ್ಯ ಮಟ್ಟದ ಮತ್ಸ್ಯಮೇಳ ಆಯೋಜಿಸಲಾಗಿದೆ.
21ರಂದು ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ರಾಜ್ಯ ಸಂಪುಟ ದರ್ಜೆ ಸಚಿವರು ಪಾಲ್ಗೊಳ್ಳಲಿದ್ದಾರೆ.
ದೇಶ ಅಂತರರಾಷ್ಟ್ರೀಯ ಮೀನುಗಳ ಪ್ರದರ್ಶನ : ಮತ್ಸ್ಯಮೇಳದಲ್ಲಿ ದೇಶ, ಅಂತರರಾಷ್ಟ್ರೀಯ ವಿವಿಧ ಬಗೆಯ ಮೀನುಗಳ ಪ್ರದರ್ಶನ ನಡೆಯಲಿದೆ. ಅಪರೂಪದ ಮೀನಿನ ಸಂತತಿಗಳನ್ನು ಈ ಮೇಳದಲ್ಲಿ ಪ್ರದರರ್ಶಿಸಲಾಗುತ್ತಿದೆ. ಮನೆಯ ಆವರಣದಲ್ಲಿ ಸಾಕಬಹುದಾದ ಮೀನುಗಳ ಪ್ರದರ್ಶನ ಹಾಗೂ ಮಾರಾಟ ಕೂಡ ಇಲ್ಲಿ ಆಯೋಜಿಸಲಾಗಿದೆ. ದೊಡ್ಡಮಟ್ಟದ ಆಕ್ವೇರಿಯಂ ಸುರಂಗ ಮಾರ್ಗವನ್ನು ನಿರ್ಮಿಸಿ ಮೀನುಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಕರಾವಳಿ ಭಾಗದ ಮೀನುಗಾರರ ಮುಖ್ಯ ಕಸುಬು ಮೀನುಗಾರಿಕೆ. ಇಲ್ಲಿನ ಸಾಂಪ್ರಾದಾಯಿಕ ಮೀನುಗಾರಿಕೆ ನಡೆದುಕೊಂಡು ಬಂದ ಹಾದಿಯ ಇತಿಹಾಸ ಸಾರುವ ಪ್ರದರ್ಶನವನ್ನು ಈ ಮೇಳದಲ್ಲಿ ಆಯೋಜಿಸಲಾಗಿದೆ. ಇಲ್ಲಿನ ಮೀನುಗಾರರು ಹಿಡಿದು ತರುವ ವಿವಿಧ ಜಾತಿಯ ಮೀನುಗಳ ಸವಿಯನ್ನು ಸವಿಯಲು ಮೀನಿನ ಖಾದ್ಯ ಮೇಳ ಆಯೋಜಿಸಲಾಗಿದೆ.
‘ಮೀನುಗಾರಿಕೆ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರಬಾರದು. ನಮ್ಮ ಕರಾವಳಿ ಭಾಗದ ಮೀನಗಾರರ ಜೀವನ, ಇಲ್ಲಿನ ಮೀನಿನ ವೈವಿಧ್ಯತೆ, ಇಲ್ಲಿನ ಮೀನಿನ ರುಚಿಯ ಬಗ್ಗೆ ರಾಜ್ಯ ಜನರಿಗೆ ತಿಳಿಯಬೇಕು ಎನ್ನುವ ಯೋಜನೆಯಿಂದ ಈ ಬೃಹತ್ ಮೇಳ ಆಯೋಜಿಸಲಾಗಿದೆ. ಮೂರು ದಿನದ ಮೇಳದಲ್ಲಿ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಅವರು ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಸ್ಥಳೀಯ ಮೀನುಗಾರರ ಸಮಸ್ಯೆಗೂ ಪರಿಹಾರ ಸಿಗುವ ನಿರೀಕ್ಷೆ ಇದೆ’ ಎಂದು ಸಚಿವ ಮಂಕಾಳ ವೈದ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.