ಕಾರವಾರ: ತಿಮಿಂಗಿಲ, ಕಡಲಾಮೆ, ಡಾಲ್ಫಿನ್‍ಗಳ ಸಂತಾನೋತ್ಪತ್ತಿ ಕ್ರಿಯೆಗೆ ಅನುಕೂಲವಾಗಿರುವ ಹೊನ್ನಾವರ ತಾಲ್ಲೂಕಿನ ಮುಗಳಿ ಕಡಲಧಾಮ ವ್ಯಾಪ್ತಿಯಲ್ಲಿ ಒಂದು ವಾರದ ಅವಧಿಯಲ್ಲಿ ಮೂರು ತಿಮಿಂಗಿಲಗಳ ಕಳೇಬರ ಸಿಕ್ಕಿವೆ. ದೊಡ್ಡಗಾತ್ರದ ಸಮುದ್ರಜೀವಿಗಳ ಸಾವಿಗೆ ಕಾರಣ ಏನು ಎಂಬುದು ನಿಗೂಢವಾಗಿದೆ.
ಸೆಪ್ಟೆಂಬರ್ 9ರಂದು ಮುಗಳಿ ಕಡಲಧಾಮ ವ್ಯಾಪ್ತಿಯ ಕಡಲತೀರದಲ್ಲಿ 35 ಮೀಟರ್ ಉದ್ದದ ಗಂಡು ತಿಮಿಂಗಿಲದ ಕಳೇಬರ ಪತ್ತೆಯಾಗಿತ್ತು. ಅದೇ ಸ್ಥಳದಿಂದ ಸ್ವಲ್ಪ ದೂರದಲ್ಲಿ ಶನಿವಾರ 25 ಮೀಟರ್ ಉದ್ದದ ಹೆಣ್ಣು ತಿಮಿಂಗಿಲದ ಕಳೇಬರ, ಮರಿಯೊಂದರ ಕಳೇಬರ ಪತ್ತೆಯಾಗಿವೆ.
ವಾರದ ಅವಧಿಯೊಳಗೆ ಮೂರು ತಿಮಿಂಗಿಲಗಳು ಸಾವನ್ನಪ್ಪಿರುವುದು ಕಡಲಜೀವಶಾಸ್ತ್ರ ಅಧ್ಯಯನಕಾರರಲ್ಲೂ ಅಚ್ಚರಿ ಉಂಟುಮಾಡಿದೆ.
‘10 ವರ್ಷಗಳಲ್ಲಿ ಜಿಲ್ಲೆಯ ವಿವಿಧೆಡೆ ಬೇರೆ ಬೇರೆ ಸಮಯದಲ್ಲಿ 10ಕ್ಕೂ ಹೆಚ್ಚು ತಿಮಿಂಗಿಲಗಳ ಕಳೇಬರ ಪತ್ತೆಯಾಗಿದ್ದವು. ಆದರೆ, ಒಂದೇ ಪ್ರದೇಶದಲ್ಲಿ ತಿಮಿಂಗಿಲಗಳ ಸರಣಿ ಸಾವು ಸಂಭವಿಸಿಲ್ಲ. ಸೆಪ್ಟೆಂಬರ್ 9ರಂದು ಸಿಕ್ಕ ತಿಮಿಂಗಿಲದ ಕಳೇಬರ ಮರಣೋತ್ತರ ಪರೀಕ್ಷೆ ನಡೆಸಲಾಗದಷ್ಟು ಜೀರ್ಣಾವಸ್ಥೆಯಲ್ಲಿತ್ತು. ವಯೋಸಹಜವಾಗಿ ಮೃತಪಟ್ಟಿರಬಹುದು’ ಎಂದು ಕಾರವಾರದ ಕಡಲಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಶಿವಕುಮಾರ ಹರಗಿ ‘ಪ್ರಜಾವಾಣಿ’ಗೆ ತಿಳಿಸಿದ್ದರು.
‘ಬಲೀನ್ ತಿಮಿಂಗಿಲಗಳು ಮುಂಗಾರು ಅವಧಿಯಲ್ಲಿ ನೇತ್ರಾಣಿ ದ್ವೀಪ, ಮುಗಳಿ ಕಡಲಧಾಮ ವ್ಯಾಪ್ತಿಯ ಸಮುದ್ರ ಪ್ರದೇಶಕ್ಕೆ ವಲಸೆ ಬರುತ್ತವೆ. ಅರಬ್ಬಿ ಸಮುದ್ರದ ಹಲವೆಡೆ ತಳಭಾಗದಲ್ಲಿ ಕಲ್ಲುಹಾಸು ಇದ್ದರೆ, ಇಲ್ಲಿ ತಳಭಾಗ ಸಂಪೂರ್ಣ ಮರಳಿನ ಪ್ರದೇಶವಿದೆ. ಅವುಗಳಿಗೆ ಮಿಲನ ಕ್ರಿಯೆ, ಸಂತಾನೋತ್ಪತ್ತಿಗೆ ಹೇಳಿಮಾಡಿಸಿದ ತಾಣ. ಸಾವಿರಾರು ಕಿ.ಮೀ ದೂರದ ಫೆಸಿಪಿಕ್ ಸಾಗರದ ಶೀತವಲಯದಿಂದ ಇಲ್ಲಿನ ಉಷ್ಣವಲಯಕ್ಕೆ ಅವು ಬರುವ ವೇಳೆ ಹಡಗುಗಳು ಡಿಕ್ಕಿಯಾಗಿ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚು’ ಎಂದು ಕಡಲಜೀವ ವಿಜ್ಞಾನಿ ಪ್ರಕಾಶ್ ಮೇಸ್ತ ಹೇಳಿದರು.
‘ಅಳಿವಿನಂಚಿನಲ್ಲಿರುವ ಜೀವಪ್ರಭೇದಗಳ ವ್ಯಾಪ್ತಿಯಲ್ಲಿರುವ ಬಲೀನ್ ತಿಮಿಂಗಿಲಗಳು ಹೀಗೆ ಸಾಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವಿದೇಶಗಳಲ್ಲಿ ತಿಮಿಂಗಿಲಗಳ ಸಂಚಾರದ ಮೇಲೆ ನಿಗಾ ಇಡಲು ಪ್ರತ್ಯೇಕ ಸಿಬ್ಬಂದಿ, ವ್ಯವಸ್ಥೆ ಇರುತ್ತದೆ. ಇಲ್ಲಿಯೂ ಸಂತಾನೋತ್ಪತ್ತಿಗೆ ಬರುವ ತಿಮಿಂಗಿಲಗಳ ಮೇಲೆ ನಿಗಾ ಇಡುವ ಕೆಲಸವಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಬಲೀನ್ ತಿಮಿಂಗಿಲ ಸೇರಿ ಅಪರೂಪದ ಕಡಲಜೀವಿಗಳು ಇರುವ ಹೊನ್ನಾವರ ಭಾಗದಲ್ಲಿ ಅರಣ್ಯ ಇಲಾಖೆಯು ಕಡಲಜೀವಿ ವಿಭಾಗ ಆರಂಭಿಸಬೇಕು. ತಿಮಿಂಗಿಲಗಳ ಸಾವು ಸಂಭವಿಸದಂತೆ ಎಚ್ಚರವಹಿಸಬೇಕು.-ಪ್ರಕಾಶ್ ಮೇಸ್ತ, ಕಡಲಜೀವ ವಿಜ್ಞಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.